Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 17 ಆಗಸ್ಟ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 17 ಆಗಸ್ಟ್ 2027

ಮಂಗಳವಾರ · ಸಾಮಾನ್ಯ ಕಾಲದ 20ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 20ನೇ ವಾರದ ಮಂಗಳವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ನ್ಯಾಯ 6:11–24

11ಆ ಮೇಲೆ ಯೆಹೋವನ ದೂತನು ಬಂದು ಒಫ್ರದಲ್ಲಿದ್ದ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿನ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. 12ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಅಂದನು. 13ಆಗ ಗಿದ್ಯೋನನು ಅವನಿಗೆ “ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು? ನಮ್ಮ ಹಿರಿಯರು, ಯೆಹೋವನು ಅದ್ಭುತಗಳನ್ನು ನಡಿಸಿ ತಮ್ಮನ್ನು ಐಗುಪ್ತದಿಂದ ಬಿಡಿಸಿದನೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಆತನು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾನಲ್ಲಾ” ಅಂದನು. 14ಆಗ ಯೆಹೋವನು ಅವನನ್ನು ಚೆನ್ನಾಗಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ನಿನ್ನ ಈ ಬಲದಿಂದ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಹೇಳಿದನು. 15ಆಗ ಗಿದ್ಯೋನನು ಆತನಿಗೆ, “ಕರ್ತನೇ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು” ಅಂದನು. 16ಯೆಹೋವನು ಅವನಿಗೆ, “ನಾನು ನಿನ್ನ ಸಂಗಡ ಇರುವುದರಿಂದ ನೀನು ಮಿದ್ಯಾನ್ಯರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ” ಅಂದನು. 17ಅವನು ಆತನಿಗೆ, “ಕರ್ತನೇ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವವರು ತಾವೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. 18ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವ ವರೆಗೆ ತಾವು ಈ ಸ್ಥಳವನ್ನು ಬಿಡಬಾರದು” ಎಂದು ಬಿನ್ನವಿಸಲು ಆತನು, “ನೀನು ತಿರುಗಿ ಬರುವ ವರೆಗೆ ನಾನು ಇಲ್ಲೇ ಇರುವೆನು” ಅಂದನು. 19ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ತೆಗೆದುಕೊಂಡು, ಒಂದು ಏಫಾ ಅಂದರೆ ಸುಮಾರು ಮೂವ್ವತ್ತು ಸೇರು ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು, ಮಾಂಸವನ್ನು ಸಿದ್ಧಮಾಡಿ, ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಏಲಾ ಮರದ ಕೆಳಗೆ ಆತನ ಮುಂದೆ ತಂದಿಟ್ಟನು. 20ಆಗ ದೇವದೂತನು ಅವನಿಗೆ, “ಮಾಂಸವನ್ನೂ, ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಅದರ ಮೇಲೆ ಹೊಯ್ಯಿ” ಅನ್ನಲು ಅವನು ಹಾಗೆಯೇ ಮಾಡಿದನು. 21ಅನಂತರ ಯೆಹೋವನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ, ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು; ಯೆಹೋವನ ದೂತನು ಅದೃಶ್ಯನಾದನು. 22ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು. 23ಆದರೆ ಯೆಹೋವನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ” ಅಂದನು. 24ಗಿದ್ಯೋನನು ಅಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ಷಾಲೋಮ್ ಎಂದು ಹೆಸರಿಟ್ಟನು; ಅದು ಈ ವರೆಗೂ ಅಬೀಯೆಜೆರನ ಗೋತ್ರದವರ ಒಫ್ರದಲ್ಲಿರುತ್ತದೆ.

ಪ್ರತಿವಚನ ಕೀರ್ತನೆ

ಕೀರ್ತ 85:8, 10–13

8ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 10ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು. 13ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.

ಸುವಾರ್ತೆ

ಮತ್ತಾ 19:23–30

23ಆಗ ಯೇಸು ತನ್ನ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ” ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 24“ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ನಿಮಗೆ ತಿರುಗಿ ಹೇಳುತ್ತೇನೆ” ಅಂದನು. 25ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಹೀಗಿದ್ದರೆ ರಕ್ಷಣೆ ಹೊಂದಲು ಯಾರಿಂದಾದೀತು?” ಎಂದು ಕೇಳಿದರು. 26ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು. 27ಆಗ ಪೇತ್ರನು ಆತನನ್ನು, ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಇದರಿಂದ ನಮಗೆ ಏನು ದೊರಕುವುದು? ಎಂದು ಕೇಳಿದನು. 28ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29ಮತ್ತು ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟು ಹೊಂದುವನು. ಅಲ್ಲದೆ ನಿತ್ಯಜೀವಕ್ಕೆ ಬಾಧ್ಯನಾಗುವನು. 30ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು