Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 12 ಆಗಸ್ಟ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 12 ಆಗಸ್ಟ್ 2027

ಗುರುವಾರ · ಸಾಮಾನ್ಯ ಕಾಲದ 19ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 19ನೇ ವಾರದ ಗುರುವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಸಂತ ಜೇನ್ ಫ್ರಾನ್ಸೆಸ್ ಡಿ ಶಾಂತಾಲ್, ಸನ್ಯಾಸಿನಿ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಹೋ 3:7–11, 13–17

7ಆಗ ಯೆಹೋವನು ಯೆಹೋಶುವನಿಗೆ “ನಾನು ಈ ದಿನ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂದು ಅವರಿಗೆ ಗೊತ್ತಾಗುವುದು. 8ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು” ಎಂದು ಹೇಳಿದನು. 9ಆಗ ಯೆಹೋಶುವನು ಇಸ್ರಾಯೇಲ್ಯರಿಗೆ “ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ” ಎಂದು ಹೇಳಿ, 10“ಜೀವಸ್ವರೂಪನಾದ ದೇವರು ನಿಮ್ಮ ಮಧ್ಯದಲ್ಲಿ ಇದ್ದಾನೆಂದು ಆತನು ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು, ಯೆಬೂಸಿಯರನ್ನು ನಿಮ್ಮ ಮುಂದೆ ಓಡಿಸಿಬಿಡುವನೆಂದು ನಿಮಗೆ ಗೊತ್ತಾಗುವುದು. 11ಹೇಗೆಂದರೆ ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಯೊರ್ದನಿನಲ್ಲಿ ಇಳಿಯವುದು. 13ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ ಮೇಲಿನಿಂದ ಹರಿದು ಬರುವ ನೀರು ಮುಂದೆ ಸಾಗದೆ, ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು” ಎಂದು ತಿಳಿಸಿದನು. 14ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. 15ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು. 16ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. 17ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.

ಪ್ರತಿವಚನ ಕೀರ್ತನೆ

ಕೀರ್ತ 114:1–6

1ಇಸ್ರಾಯೇಲರು ಐಗುಪ್ತ ದೇಶವನ್ನೂ, ಯಾಕೋಬನ ಮನೆತನದವರು ಅನ್ಯಜನಾಂಗವನ್ನು ಬಿಟ್ಟ ಮೇಲೆ, 2ಯೆಹೂದವು ದೇವರ ಪರಿಶುದ್ಧ ವಾಸಸ್ಥಾನವೂ, ಇಸ್ರಾಯೇಲ್ ಆತನ ರಾಜ್ಯವೂ ಆಯಿತು. 3ಸಮುದ್ರವು ಕಂಡು ಓಡಿಹೋಯಿತು; ಯೊರ್ದನ್ ಹೊಳೆಯು ಹಿಂದಿರುಗಿತು. 4ಪರ್ವತಗಳು ಟಗರುಗಳಂತೆಯೂ, ಗುಡ್ಡಗಳು ಕುರಿಮರಿಗಳಂತೆಯೂ ಹಾರಾಡಿದವು. 5ಸಮುದ್ರವೇ, ನಿನಗೇನಾಯಿತು? ಏಕೆ ಓಡಿ ಹೋಗುತ್ತೀ? ಯೊರ್ದನೇ, ಏಕೆ ಹಿಂದಿರುಗುತ್ತೀ? 6ಪರ್ವತಗಳೇ, ನೀವು ಟಗರುಗಳಂತೆಯೂ, ಗುಡ್ಡಗಳೇ, ನೀವು ಕುರಿಮರಿಗಳಂತೆಯೂ ಏಕೆ ಹಾರಾಡುತ್ತೀರಿ?

ಸುವಾರ್ತೆ

ಮತ್ತಾ 18:21–19:1

21ಆಗ ಪೇತ್ರನು ಆತನ ಬಳಿಗೆ ಬಂದು, “ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು. 22ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ. 23ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು. 25ಆ ಸಾಲ ತೀರಿಸುವುದಕ್ಕೆ ಅವನಲ್ಲಿ ಏನೂ ಇಲ್ಲದುದರಿಂದ ಅವನ ಒಡೆಯನು ಅವನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು. 26ಆ ಸೇವಕನು ಮೊಣಕಾಲೂರಿ ತನ್ನ ತಲೆಯನ್ನು ಬಾಗಿ ಅವನಿಗೆ, ‘ಒಡೆಯನೇ, ನನ್ನ ಮೇಲೆ ತಾಳ್ಮೆಯಿರಲಿ, ನಿನ್ನದೆಲ್ಲವನ್ನೂ ನಾನು ಕೊಟ್ಟು ತೀರಿಸುತ್ತೇನೆಂದು’ ಹೇಳಿದನು. 27ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು. 28ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು. 29ಆದರೆ ಅವನ ಜೊತೆ ಸೇವಕನು ಮೊಣಕಾಲೂರಿ, ‘ನನ್ನ ಮೇಲೆ ತಾಳ್ಮೆಯಿರಲಿ ನಾನು ತೀರಿಸುತ್ತೇನೆ’ ಎಂದು ಬೇಡಿಕೊಂಡನು. 30ಆದರೆ ಅವನು ಒಪ್ಪದೆ ಹೊರಟುಹೋಗಿ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. 31ಅವನ ಜೊತೆ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ತಮ್ಮ ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು. 32ಆಗ ಅವನ ಒಡೆಯನು ಅವನನ್ನು ಕರಸಿ, ‘ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ? 33ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ, 34ಒಡೆಯನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಅವನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು. 35ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಅಂದನು. 19:1ಹೀಗಿರುವಾಗ ಯೇಸು ಈ ಮಾತುಗಳನ್ನು ಮುಗಿಸಿದ ಮೇಲೆ ಗಲಿಲಾಯವನ್ನು ಬಿಟ್ಟು ಯೊರ್ದನ್ ಹೊಳೆಯ ಆಚೆಯಿರುವ ಯೂದಾಯ ಪ್ರಾಂತ್ಯಗಳಿಗೆ ಹೋದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು