ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 13 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 13 ಆಗಸ್ಟ್ 2027
ಶುಕ್ರವಾರ · ಸಾಮಾನ್ಯ ಕಾಲದ 19ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 19ನೇ ವಾರದ ಶುಕ್ರವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತರಾದ ಪೊಂಟಿಯನ್, ಪೋಪ್, ಮತ್ತು ಹಿಪ್ಪೊಲಿಟಸ್, ಧರ್ಮಗುರು, ಹುತಾತ್ಮರು · ಐಚ್ಛಿಕ ಸ್ಮರಣೆ
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
1ತರುವಾಯ ಯೆಹೋಶುವನು ಇಸ್ರಾಯೇಲ್ಯರ ಎಲ್ಲಾ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ಪ್ರಧಾನರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಕಾಣಿಸಿಕೊಂಡರು. 2ಯೆಹೋಶುವನು ಅವರಿಗೆ, “ನಿಮ್ಮ ದೇವರಾದ ಯೆಹೋವನು ಹೇಳುವುದೇನೆಂದರೆ, ಅಬ್ರಹಾಮ, ನಾಹೋರ ಎಂಬುವವರ ತಂದೆಯಾದ ತೆರಹ, ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು. 3ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿ, ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು. 4ಇಸಾಕನಿಗೆ ಯಾಕೋಬ, ಏಸಾವ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿ, ಏಸಾವನಿಗೆ ಸೇಯೀರ್ ಪರ್ವತವನ್ನೂ ಸ್ವತ್ತಾಗಿ ದಯಪಾಲಿಸಿದೆನು. ಯಾಕೋಬನಾದರೋ ತನ್ನ ಮಕ್ಕಳ ಸಹಿತವಾಗಿ ಐಗುಪ್ತ ದೇಶಕ್ಕೆ ಹೋದನು. 5ತರುವಾಯ ನಾನು ಮೋಶೆ, ಆರೋನರನ್ನೂ ಕಳುಹಿಸಿ, ಆ ಐಗುಪ್ತದಲ್ಲಿ ಅನೇಕ ಮಹತ್ಕಾರ್ಯಗಳನ್ನು ನಡಿಸಿ, ಅವರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆತಂದೆನು. 6ನಿಮ್ಮ ಪೂರ್ವಿಕರು ಐಗುಪ್ತದಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಿರುವಾಗ ಐಗುಪ್ತರು ರಥಾಶ್ವಬಲಗಳ ಸಹಿತವಾಗಿ ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿದರು. 7ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ, ಐಗುಪ್ತರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನು ಉಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವು ಸಾಕ್ಷಿಗಳಾಗಿದ್ದಿರಿ. 8ನೀವು ಬಹು ಕಾಲದವರೆಗೆ ಅರಣ್ಯದಲ್ಲಿದ್ದ ನಂತರ ನಿಮ್ಮನ್ನು ಯೊರ್ದನಿನ ಆಚೆಯಲ್ಲಿ ಅಮೋರಿಯರ ದೇಶಕ್ಕೆ ಕರೆತಂದೆನು. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈಗೆ ಕೊಟ್ಟುಬಿಟ್ಟೆನು. ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ಸಂಹರಿಸಿದೆನು. 9ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರಾಯೇಲರಾದ ನಿಮಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೆ ಎದ್ದು ನಿಮ್ಮನ್ನು ಶಪಿಸುವುದಕ್ಕೋಸ್ಕರ ಬೆಯೋರನ ಮಗನಾದ ಬಿಳಾಮನನ್ನು ಕರೆಕಳುಹಿಸಿದನು. 10ಆದರೆ ನಾನು ಬಿಳಾಮನಿಗೆ ಸಮ್ಮತಿಕೊಡಲಿಲ್ಲವಾದುದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆನು. 11ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಆಗ ಯೆರಿಕೋವಿನವರು ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲಾ ನಿಮಗೆ ವಿರೋಧವಾಗಿ ಯುದ್ಧಕ್ಕೆ ಬರಲು ನಾನು ಅವರೆಲ್ಲರನ್ನು ನಿಮ್ಮ ಕೈಗೆ ಒಪ್ಪಿಸಿದೆನು. 12ಇದಲ್ಲದೆ ನಾನು ಕಡಜದ ಹುಳಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆನು. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿ ಬಿಲ್ಲುಗಳಿಂದಲ್ಲ. 13ನೀವು ವ್ಯವಸಾಯ ಮಾಡದೆ ಬೆಳೆದಿರುವ ಭೂಮಿಯನ್ನು ನಿಮಗೆ ಕೊಟ್ಟೆನು. ನೀವು ಕಟ್ಟದೆ ಇರುವ ಪಟ್ಟಣಗಳಲ್ಲಿ ವಾಸಿಸುತ್ತಿದ್ದೀರಿ. ನೀವು ನೆಟ್ಟು ಬೆಳೆಸದೆ ಇರುವ ದ್ರಾಕ್ಷಿ, ಎಣ್ಣೆಮರ ಇವುಗಳ ಫಲಗಳನ್ನು ಅನುಭವಿಸುತ್ತೀದ್ದೀರಿ”
ಪ್ರತಿವಚನ ಕೀರ್ತನೆ
ಕೀರ್ತ 136:1–3, 16–18, 21–22, 24
1ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು. 2ದೇವಾಧಿದೇವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು. 3ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು. 16ಆತನು ತನ್ನ ಪ್ರಜೆಯನ್ನು ಅರಣ್ಯದೊಳಗೆ ಕರೆತಂದನು, ಆತನ ಪ್ರೀತಿಯು ಶಾಶ್ವತವಾದದ್ದು. 17ದೊಡ್ಡ ಅರಸರನ್ನು ಹೊಡೆದನು, ಆತನ ಪ್ರೀತಿಯು ಶಾಶ್ವತವಾದದ್ದು. 18ಶ್ರೇಷ್ಠ ರಾಜರನ್ನು ಸಂಹರಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು. 21ಅವರ ದೇಶವನ್ನು ಇಸ್ರಾಯೇಲರಿಗೆ ಸ್ವತ್ತಾಗಿ ಕೊಟ್ಟನು, ಆತನ ಪ್ರೀತಿಯು ಶಾಶ್ವತವಾದದ್ದು. 22ಆತನ ಸೇವಕರಾದ ಇಸ್ರಾಯೇಲರಿಗೆ ಅದು ಸ್ವಾಸ್ತ್ಯವಾಯಿತು, ಆತನ ಪ್ರೀತಿಯು ಶಾಶ್ವತವಾದದ್ದು. 24ನಮ್ಮ ಶತ್ರುಗಳಿಂದ ನಮ್ಮನ್ನು ಬಿಡಿಸಿದನು, ಆತನ ಪ್ರೀತಿಯು ಶಾಶ್ವತವಾದದ್ದು.
ಸುವಾರ್ತೆ
3ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, “ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?” ಎಂದು ಕೇಳಲು, 4ಆತನು ಪ್ರತ್ಯುತ್ತರವಾಗಿ, “ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು, 5‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’ 6ಹೀಗಿರುವುದರಿಂದ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಅಂದನು. 7ಅದಕ್ಕೆ ಅವರು ಆತನನ್ನು, “ಹಾಗಾದರೆ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಏಕೆ ಆಜ್ಞೆ ಕೊಟ್ಟನು?” ಎಂದು ಕೇಳಿದರು. 8ಅದಕ್ಕೆ ಯೇಸು ಅವರಿಗೆ, “ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು. 9ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ; ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು. 10ಅದಕ್ಕೆ ಶಿಷ್ಯರು ಯೇಸುವಿಗೆ, “ಹೆಂಡತಿಯೊಂದಿಗೆ ಗಂಡನ ಸಂಬಂಧ ಹೀಗಿದ್ದರೆ ಮದುವೆಯಾಗುವುದು ಒಳ್ಳೆಯದಲ್ಲ” ಅಂದರು. 11ಆದರೆ ಯೇಸು ಅವರಿಗೆ, “ಈ ಮಾತನ್ನು ಎಲ್ಲರೂ ಅಂಗೀಕರಿಸಲಾರರು ಆದರೆ ಯಾರಿಗೆ ಆ ವರವು ಕೊಡಲ್ಪಟ್ಟಿದೆಯೋ ಅವರು ಮಾತ್ರ ಅದನ್ನು ಅಂಗೀಕರಿಸುವರು. 12ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ ಮತ್ತು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ ಮತ್ತು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಈ ಬೋಧನೆಯನ್ನು ಅಂಗೀಕರಿಸಬಲ್ಲವರು ಅಂಗೀಕರಿಸಲಿ” ಎಂದು ಹೇಳಿದನು.
ಇಂದಿನ ಸಂತರು
- ಸಂತರಾದ ಪೊಂಟಿಯನ್, ಪೋಪ್, ಮತ್ತು ಹಿಪ್ಪೊಲಿಟಸ್, ಧರ್ಮಗುರು, ಹುತಾತ್ಮರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು