Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 11 ಆಗಸ್ಟ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 11 ಆಗಸ್ಟ್ 2027

ಬುಧವಾರ · ಸಾಮಾನ್ಯ ಕಾಲದ 19ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 19ನೇ ವಾರದ ಬುಧವಾರ

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತ ಕ್ಲೇರ್, ಕನ್ಯೆ · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಧರ್ಮೋ 34:1–12

1ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು ಕಾನಾನ್ ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದ ವರೆಗೂ ಗಿಲ್ಯಾದ್ ಸೀಮೆ, 2ನಫ್ತಾಲಿ ಪ್ರದೇಶ, ಎಫ್ರಾಯೀಮ್ ಮತ್ತು ಮನಸ್ಸೆ ಕುಲಗಳವರ ಸೀಮೆ, ಪಶ್ಚಿಮಸಮುದ್ರದವರೆಗೂ ಯೆಹೂದ ಸೀಮೆ, 3ದಕ್ಷಿಣಪ್ರದೇಶ, ಚೋಗರೂರಿನ ತನಕ ಯೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿರುವ ಮೈದಾನ ಇದನ್ನೆಲ್ಲಾ ಅವನಿಗೆ ತೋರಿಸಿ, 4“ನಾನು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನಮಾಡಿದ ದೇಶವು ಇದೇ; ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿ ದಾಟಿ ಅಲ್ಲಿಗೆ ಹೋಗಕೂಡದು” ಎಂದು ಹೇಳಿದನು. 5ಯೆಹೋವನ ಮಾತಿನಂತೆ ಆತನ ಸೇವಕನಾದ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮರಣ ಹೊಂದಿದನು. 6ಮೋವಾಬ್ಯರ ದೇಶದಲ್ಲಿ ಬೇತ್‍ಪೆಗೋರದ ಎದುರಾಗಿರುವ ಕಣಿವೆಯಲ್ಲಿ (ಯೆಹೋವನು) ಅವನ ದೇಹವನ್ನು ಸಮಾಧಿಮಾಡಿದನು; ಅವನ ಸಮಾಧಿ ಎಲ್ಲಿದೆಯೋ ಇಂದಿನ ವರೆಗೆ ಯಾರಿಗೂ ತಿಳಿಯದು. 7ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ. 8ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರು ಮೋಶೆಗೋಸ್ಕರ ಮೂವತ್ತು ದಿನಗಳ ವರೆಗೆ ದುಃಖಿಸಿದರು. ಅಲ್ಲಿಗೆ ಮೋಶೆಯ ಪ್ರಲಾಪದ ದಿನಗಳು ಮುಗಿದವು. 9ಮೋಶೆಯು ನೂನನ ಮಗನಾದ ಯೆಹೋಶುವನ ಮೇಲೆ ಕೈಯಿಟ್ಟಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರವಾಗಿ ಇಸ್ರಾಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು. 10ಮೋಶೆಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ, ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು. 11ಆತನು ಐಗುಪ್ತದೇಶದಲ್ಲಿ ಫರೋಹನ ಮುಂದೆಯೂ, ಅವನ ಪ್ರಜಾಪರಿವಾರದವರ ಮುಂದೆಯೂ ವಿಧವಿಧವಾದ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಯೆಹೋವನು ಅವನನ್ನು ಕಳುಹಿಸಿದನು. 12ಅವನು ಇಸ್ರಾಯೇಲರ ಕಣ್ಣ ಮುಂದೆ ವಿಶೇಷವಾದ ಭುಜಪರಾಕ್ರಮವನ್ನೂ ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು.

ಪ್ರತಿವಚನ ಕೀರ್ತನೆ

ಕೀರ್ತ 66:1–3, 5, 8, 16–17

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಹಾಡು; ಕೀರ್ತನೆ. ಸರ್ವಭೂನಿವಾಸಿಗಳೇ, ದೇವರಿಗೆ ಜಯಧ್ವನಿ ಮಾಡಿರಿ. 2ಆತನ ನಾಮದ ಮಹತ್ತನ್ನು ಕೀರ್ತಿಸಿರಿ; ಆತನ ಪ್ರಭಾವವನ್ನು ವರ್ಣಿಸುತ್ತಾ ಕೊಂಡಾಡಿರಿ. 3ನೀವು ದೇವರಿಗೆ, “ನಿನ್ನ ಕೃತ್ಯಗಳು ಎಷ್ಟೋ ಭಯಂಕರವಾಗಿವೆ; ನಿನ್ನ ಪರಾಕ್ರಮದ ಮಹತ್ತಿನ ದೆಸೆಯಿಂದ ನಿನ್ನ ಶತ್ರುಗಳು ನಿನ್ನ ಮುಂದೆ ಮುದುರಿಕೊಳ್ಳುವರು; 5ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಆತನ ಆಳ್ವಿಕೆ ನರರಲ್ಲಿ ಭಯ ಹುಟ್ಟಿಸತಕ್ಕದ್ದಾಗಿದೆ. 8ಜನಾಂಗಗಳೇ, ನಮ್ಮ ದೇವರನ್ನು ವಂದಿಸಿರಿ; ಆತನನ್ನು ಸ್ತುತಿಸುವ ಧ್ವನಿ ಕೇಳಿಸಲಿ. 16ಎಲ್ಲಾ ದೇವಭಕ್ತರೇ, ಬಂದು ಕೇಳಿರಿ; ಆತನು ನನಗಾಗಿ ಮಾಡಿದ್ದೆಲ್ಲವನ್ನು ನಿಮಗೆ ತಿಳಿಸುವೆನು. 17ನನ್ನ ಮೊರೆಯೊಡನೆ ಕೃತಜ್ಞತಾಸ್ತುತಿಯೂ ನನ್ನ ನಾಲಿಗೆಯ ಮೇಲಿತ್ತು.

ಸುವಾರ್ತೆ

ಮತ್ತಾ 18:15–20

15“ನಿನ್ನ ಸಹೋದರನು ನಿನ್ನ ವಿರುದ್ಧ ತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ. 16ಆದರೆ ಅವನು ನಿನ್ನ ಮಾತು ಕೇಳದೇ ಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಿರಪಡುವ ಹಾಗೆ ಒಬ್ಬನನ್ನು ಅಥವಾ ಇಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. 17ಅವನು ಅವರ ಮಾತನ್ನು ಕೇಳದೆ ಹೋದರೆ ಅದನ್ನು ಸಭೆಗೆ ಹೇಳು. ಅವನು ಸಭೆಯ ಮಾತನ್ನು ಕೇಳದೆ ಹೋದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ. 18“ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ಭೂಲೋಕದಲ್ಲಿ ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 19ಇದಲ್ಲದೆ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕ ಯಾವುದಾದರು ಒಂದು ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ. 20ಏಕೆಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬರುತ್ತಾರೋ ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ” ಅಂದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು