Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 1 ಆಗಸ್ಟ್

ಆರ್ಥೊಡಾಕ್ಸ್ ಪಂಚಾಂಗ · ಜುಲೈ 19 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 1 ಆಗಸ್ಟ್ 2027

ಭಾನುವಾರ · ಸ್ವರ 5

ಹಬ್ಬಗಳು ಮತ್ತು ಸಂತರು

ಪಂಚಾಶತ್ತಮದ ನಂತರದ ಆರನೆಯ ಭಾನುವಾರ

ಮೊದಲ ಆರು ಸಾರ್ವತ್ರಿಕ ಮಹಾಸಭೆಗಳ ಪಿತೃಗಳು

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ (ಪಿತೃಗಳು)

ಆದಿ 14:14–20

14ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು. 15ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು. 16ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು. 17ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು. 18ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು. 19ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ; 20ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.

ಸಂಧ್ಯಾ ಪ್ರಾರ್ಥನೆ: ವಾಚನ (ಪಿತೃಗಳು)

ಧರ್ಮೋ 1:8–11, 15–17

8ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ. ಯೆಹೋವನೆಂಬ ನಾನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರಿಗೂ ಮತ್ತು ಅವರ ಸಂತತಿಯವರಿಗೂ ಆ ದೇಶವನ್ನು ಕೊಡುತ್ತೇನೆಂದು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ’” ಎಂದು ಅಜ್ಞಾಪಿಸಿದನು. 9ಆ ಕಾಲದಲ್ಲಿ ನಾನು ನಿಮ್ಮ ಸಂಗಡ ಮಾತನಾಡಿ, “ನಿಮ್ಮ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ. 10ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಧಿಕ ಸಂಖ್ಯೆಯಲ್ಲಿ ಹೆಚ್ಚಿಸಿದ್ದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗಿದ್ದೀರಿ. 11ನೀವು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮ್ಮನ್ನು ಹೆಚ್ಚಿಸಿ, ತಾನು ವಾಗ್ದಾನಮಾಡಿದ ಪ್ರಕಾರವೇ ನಿಮಗೆ ಶುಭಗಳನ್ನು ಅನುಗ್ರಹಿಸಲಿ. 15ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ, ಬುದ್ಧಿವಂತರನ್ನು ಆರಿಸಿಕೊಂಡು ಒಂದೊಂದು ಕುಲದಲ್ಲಿ ಸಾವಿರ ಜನರಿಗೆ ಒಬ್ಬರಂತೆ, ನೂರು ಜನರಿಗೆ ಒಬ್ಬರಂತೆ, ಐವತ್ತು ಜನರಿಗೆ ಒಬ್ಬರಂತೆ ಮತ್ತು ಹತ್ತು ಜನರಿಗೆ ಒಬ್ಬರಂತೆ ಅಧಿಕಾರಿಗಳನ್ನಾಗಿಯೂ ಮತ್ತು ಉಪ ಅಧಿಕಾರಿಗಳನ್ನಾಗಿಯೂ ನೇಮಿಸಿದೆನು. 16ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ, “ನೀವು ಸ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅವರು ಇಸ್ರಾಯೇಲರೊಡನೆ ವ್ಯಾಜ್ಯವಾಡಿದರೂ, ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪುಮಾಡಬೇಕು. 17ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು.

ಸಂಧ್ಯಾ ಪ್ರಾರ್ಥನೆ: ವಾಚನ (ಪಿತೃಗಳು)

ಧರ್ಮೋ 10:14–21

14ನಿಮ್ಮಿಂದ ಬೇರೇನೂ ಕೇಳಿಕೊಳ್ಳುತ್ತಾನೆ? ಆಲೋಚಿಸಿರಿ; ಉನ್ನತವಾದ ಆಕಾಶಮಂಡಲವೂ ಮತ್ತು ಭೂಮಿಯೂ, ಅದರಲ್ಲಿರುವ ಎಲ್ಲವೂ ನಿಮ್ಮ ದೇವರಾದ ಯೆಹೋವನವೇ. 15ಆದರೂ ಆತನು ನಿಮ್ಮ ಪೂರ್ವಿಕರಲ್ಲಿ ಇಷ್ಟವುಳ್ಳವನಾಗಿ ಅವರನ್ನು ಪ್ರೀತಿಸಿದ್ದರಿಂದ ಈಗ ನಿಮ್ಮ ಅನುಭವಕ್ಕೆ ಬಂದಂತೆ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲಾ ಜನಾಂಗಗಳೊಳಗಿಂದ ಆರಿಸಿಕೊಂಡನು. 16ಆದುದರಿಂದ ನೀವು ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿರಿ. 17ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ, ಕರ್ತರ ಕರ್ತನಾಗಿಯೂ ಇದ್ದಾನೆ. ಆತನು ಪರಮದೇವರೂ, ಪರಾಕ್ರಮಿಯೂ ಮತ್ತು ಭಯಂಕರನೂ ಆಗಿದ್ದಾನೆ. ಆತನು ಪಕ್ಷಪಾತ ಮಾಡುವವನಲ್ಲ ಹಾಗೂ ಲಂಚತೆಗೆದುಕೊಳ್ಳುವವನಲ್ಲ. 18ಆತನು ಅನಾಥರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ. 19ಐಗುಪ್ತದೇಶದಲ್ಲಿ ನೀವೇ ಪರದೇಶಿಗಳಾಗಿದ್ದದ್ದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿರಿ. 20ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ, ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು, ಆತನ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. 21ಆತನೊಬ್ಬನೇ ನಿಮ್ಮ ಸ್ತುತಿ ಸ್ತೋತ್ರಕ್ಕೆ ಪಾತ್ರನು; ಆತನು ನಿಮ್ಮ ದೇವರು; ನೀವು ನೋಡಿದ ಆ ಅದ್ಭುತವಾದ ಮಹತ್ಕಾರ್ಯಗಳನ್ನು ನಿಮಗೋಸ್ಕರ ನಡಿಸಿದವನು ಆತನೇ.

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಉದಯಕಾಲದ ಆರನೆಯ ಸುವಾರ್ತೆ

ಲೂಕ 24:36–53

36ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು. 37ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು. 38ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ? 39ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು. 40ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು. 41ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು, 42ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು. 43ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು. 44ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು. 45ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು. 46ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ, 47ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ. 48ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ. 49ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು. 50ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. 51ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು. 52ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ, 53ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.

ಪತ್ರಿಕೆ

ರೋಮಾ 12:6–14

6ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ಹೊಂದಿದ ವರವು ಪ್ರವಾದನೆ ರೂಪವಾಗಿದ್ದರೆ, ನಮ್ಮ ನಂಬಿಕೆಗೆ ತಕ್ಕ ಹಾಗೆ ಪ್ರವಾದನೆ ಹೇಳೋಣ. 7ಅದು ಸಭಾಸೇವೆಯ ರೂಪವಾಗಿದ್ದರೆ ಪ್ರಾಮಾಣಿಕವಾಗಿ ಸಭಾಸೇವೆಯನ್ನು ಮಾಡುತ್ತಾ ಇರೋಣ. 8ಬೋಧಿಸುವವನು ಬೋಧಿಸುವುದರಲ್ಲಿಯೂ, ಬುದ್ಧಿಹೇಳುವವನು ಬುದ್ಧಿ ಹೇಳುವುದರಲ್ಲಿಯೂ ನಿರತನಾಗಿರಲಿ. ದಾನಕೊಡುವವನು ಯಥಾರ್ಥಮನಸ್ಸಿನಿಂದ ಕೊಡಲಿ. ದಾರಿ ತೋರಿಸುವವನು ಆಸಕ್ತಿಯಿಂದ ಅದನ್ನು ಮಾಡಲಿ. ಕಷ್ಟದಲ್ಲಿರುವವರಿಗೆ ಉಪಕಾರಮಾಡುವವನು ಸಂತೋಷವಾಗಿ ಮಾಡಲಿ. 9ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನವನ್ನು ತಿರಸ್ಕರಿಸಿರಿ, ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. 10ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. 11ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರಿ. 12ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರಿ, ಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. 13ದೇವಜನರಿಗೆ ಕೊರತೆ ಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಆಚರಿಸಿರಿ. 14ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದ ಮಾಡಿರಿ; ಶಪಿಸದೆ ಆಶೀರ್ವದಿಸಿರಿ.

ಪತ್ರಿಕೆ (ಪಿತೃಗಳು)

ಇಬ್ರಿ 13:7–16

7ನಿಮಗೆ ದೇವರ ವಾಕ್ಯವನ್ನು ಬೋಧಿಸಿದ ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ಅವರ ನಂಬಿಕೆಯನ್ನು ಅನುಸರಿಸಿರಿ. 8ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. 9ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ. 10ನಮಗೊಂದು ಯಜ್ಞವೇದಿ ಉಂಟು ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ. 11ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ. 12ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು. 13ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. 14ಏಕೆಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ. 15ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.

ಪತ್ರಿಕೆ (ಸಂತ ಸೆರಾಫಿಮ್)

ಗಲಾ 5:22–6:2

22ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ, 23ಸಾಧುತ್ವ, ಶಮೆದಮೆ ಇಂಥವುಗಳೇ. ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ. 24ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ. 25ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ. 26ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ. 6:1ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. 2ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ನೀತಿನಿಯಮಗಳನ್ನು ನೆರವೇರಿಸಿರಿ.

ಸುವಾರ್ತೆ

ಮತ್ತಾ 9:1–8

1ಯೇಸು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು. 2ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. 3ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು. 4ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ? 5ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ? 6ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು. 7ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು. 8ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.

ಸುವಾರ್ತೆ (ಪಿತೃಗಳು)

ಯೋಹಾ 17:1–13

1ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದೇನೆಂದರೆ, “ತಂದೆಯೇ, ಸಮಯ ಬಂದಿದೆ; ಮಗನು ನಿನ್ನನ್ನು ಮಹಿಮೆಪಡಿಸುವುದಕೊಸ್ಕರ ನಿನ್ನ ಮಗನನ್ನು ಮಹಿಮೆಪಡಿಸು. 2ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು, ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವೆ. 3ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು. 4ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಲೋಕದಲ್ಲಿ ನಾನು ನಿನ್ನನ್ನು ಮಹಿಮೆಪಡಿಸಿದ್ದೇನೆ. 5ಈಗ ತಂದೆಯೇ, ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು, ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಂತೆಯೇ ನಿನ್ನೊಂದಿಗೆ ನನ್ನನ್ನು ಮಹಿಮೆಪಡಿಸು. 6“ಲೋಕದಲ್ಲಿ ನೀನು ನನಗೆ ಕೊಟ್ಟಿರುವ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು ಮತ್ತು ನೀನು ಇವರನ್ನು ನನಗೆ ಕೊಟ್ಟಿದ್ದೀ. ಇವರು ನಿನ್ನ ವಾಕ್ಯಕ್ಕೆ ವಿಧೇಯರಾಗಿದ್ದಾರೆ. 7ನೀನು ನನಗೆ ಕೊಟ್ಟದ್ದೆಲ್ಲವೂ ನಿನ್ನಿಂದಲೇ ಬಂದಿದೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ. 8ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ. 9ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ಲೋಕಕ್ಕೋಸ್ಕರ ಬೇಡಿಕೊಳ್ಳದೆ, ನೀನು ನನಗೆ ಕೊಟ್ಟವರಿಗಾಗಿಯೇ ಬೇಡಿಕೊಳ್ಳುತ್ತೇನೆ, ಏಕೆಂದರೆ, ಇವರು ನಿನ್ನವರು. 10ನನ್ನದೆಲ್ಲವೂ ನಿನ್ನದೇ ಮತ್ತು ನಿನ್ನದೆಲ್ಲವೂ ನನ್ನದೇ. ನಾನು ಇವರಲ್ಲಿ ಮಹಿಮೆಗೊಂಡಿದ್ದೇನೆ. 11ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು. 12ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ. 13“ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ.

ಸುವಾರ್ತೆ (ಸಂತ ಸೆರಾಫಿಮ್)

ಲೂಕ 6:17–23

17ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು. 18ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು. 19ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು. 20ತರುವಾಯ ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿನೋಡಿ ಹೇಳಿದ್ದೇನಂದರೆ, “ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ. 21ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವುದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ. 22“ಮನುಷ್ಯಕುಮಾರನ ನಿಮಿತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರ ಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು. 23ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 19 ಜುಲೈ ಎಂದರೆ ನಾಗರಿಕ ಪಂಚಾಂಗದ 1 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು