ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 2 ಆಗಸ್ಟ್
ಆರ್ಥೊಡಾಕ್ಸ್ ಪಂಚಾಂಗ · ಜುಲೈ 20 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 2 ಆಗಸ್ಟ್ 2027
ಸೋಮವಾರ · ಪಂಚಾಶತ್ತಮದ ನಂತರದ ಏಳನೆಯ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Holy Glorious Prophet Elijah (9th C BC)
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
1ಗಿಲ್ಯಾದಿನ ತಿಷ್ಬೀಯ ಊರಿನವನಾದ ಎಲೀಯ ಎಂಬುವವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಾಣೆ, 2ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವುದಿಲ್ಲ” ಅಂದನು. 3ತರುವಾಯ ಯೆಹೋವನು ಎಲೀಯನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ ಯೊರ್ದನ್ ಹೊಳೆಯ ಆಚೆಯಲ್ಲಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ. 4ಆ ಹಳ್ಳದ ನೀರು ನಿನಗೆ ಕುಡಿಯುವ ಪಾನವಾಗಿರುವುದು. ನಿನಗೆ ಆಹಾರ ತಂದು ಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. 5ಎಲೀಯನು ಯೆಹೋವನ ಅಪ್ಪಣೆಯಂತೆ ಯೊರ್ದನಿನ ಪೂರ್ವದಿಕ್ಕಿರುವ ಕೆರೀತ್ ಹಳ್ಳದ ಬಳಿಗೆ ಹೋಗಿ ಅಲ್ಲಿ ವಾಸಮಾಡ ತೊಡಗಿದನು. 6ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ ಮತ್ತು ಮಾಂಸಗಳನ್ನು ತಂದುಕೊಡುತ್ತಿದ್ದವು. ಅವನು ಇವುಗಳನ್ನು ತಿನ್ನುತ್ತಿದ್ದನು. ಹಳ್ಳದ ನೀರು ಅವನಿಗೆ ಪಾನವಾಗಿತ್ತು. 7ದೇಶದಲ್ಲಿ ಮಳೆಯಿಲ್ಲದ್ದರಿಂದ ಕೆಲವು ದಿನಗಳಾದನಂತರ ಹಳ್ಳವು ಬತ್ತಿಹೋಯಿತು. 8ಆಗ ಎಲೀಯನಿಗೆ ಯೆಹೋವನ ಮಾತು ಕೇಳಿ ಬಂತು, 9ಆತನು ಅವನಿಗೆ, “ನೀನು ಇಲ್ಲಿಂದ ಚೀದೋನ್ಯರ ಚಾರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಮಾಡು. ನಿನ್ನನ್ನು ಸಾಕಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ” ಅಂದನು. 10ಅವನು ಅಲ್ಲಿಂದ ಹೊರಟು ಚಾರೆಪ್ತಾದ ಊರುಬಾಗಿಲಿನ ಸಮೀಪಕ್ಕೆ ಬಂದಾಗ ಸೌದೆಯನ್ನು ಕೂಡಿಸುತ್ತಿರುವ ಒಬ್ಬ ವಿಧವೆಯನ್ನು ಕಂಡನು. ಅವನು ಆಕೆಯನ್ನು ಕೂಗಿ, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ” ಎಂದು ಹೇಳಿದನು. 11ಆಕೆಯು ಹೋಗುತ್ತಿರುವಾಗ ಪುನಃ ಆಕೆಯನ್ನು ಕರೆದು, “ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ” ಅಂದನು. 12ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು. 13ಆಗ ಎಲೀಯನು ಆಕೆಗೆ, “ಹೆದರಬೇಡ, ನೀನು ಹೇಳಿದಂತೆಯೇ ಮಾಡು. ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. 14ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ, ‘ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಿಕೆಯಲ್ಲಿರುವ ಹಿಟ್ಟು ತೀರುವುದಿಲ್ಲ ಮತ್ತು ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವುದಿಲ್ಲ’” ಎಂದು ಹೇಳುತ್ತಾನೆ. 15ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ, ಆಕೆಯ ಮನೆಯವರೂ ಮತ್ತು ಎಲೀಯನು ಅದನ್ನು ಅನೇಕ ದಿನಗಳವರೆಗೆ ಊಟಮಾಡಿದರು. 16ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ. 17ಕೆಲವು ದಿನಗಳಾದನಂತರ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಹುಡುಗನಿಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. 18ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು. 19ಅವನು ಆಕೆಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿ ಅವನನ್ನು ಆಕೆಯ ಮಡಿಲಿನಿಂದ ತೆಗೆದುಕೊಂಡು, ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ ತನ್ನ ಮಂಚದ ಮೇಲೆ ಮಲಗಿಸಿದನು. 20ಅನಂತರ ಅವನು ಯೆಹೋವನಿಗೆ, “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ, ಆಕೆಗೆ ಕೇಡನ್ನುಂಟುಮಾಡಿದ್ದೇನು?” ಎಂದು ಕೇಳಿದನು. 21ಆನಂತರ ಹುಡುಗನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರುಗಿ ಬರುವಂತೆ ಮಾಡು” ಎಂಬುದಾಗಿ ಆತನಿಗೆ ಮೊರೆಯಿಟ್ಟನು. 22ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದ್ದರಿಂದ ಹುಡುಗನ ಪ್ರಾಣವು ತಿರುಗಿ ಬಂದು ಅವನು ಜೀವಿಸಿದನು. 23ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡು ಹೋಗಿ, ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು ನಿನ್ನ ಮಗನು ಜೀವಿಸುತ್ತಿದ್ದಾನೆ” ಅಂದನು.
ಸಂಧ್ಯಾ ಪ್ರಾರ್ಥನೆ: ವಾಚನ
1 ಅರಸು 19:19–21 · 2 ಅರಸು 2:1, 6–14
19ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆ ಜೋಡಿಯಿಂದ ತಾನಾಗಿಯೇ ಹೊಲವನ್ನು ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. 20ಕೂಡಲೇ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ, ಅನಂತರ ನಿನ್ನನ್ನು ಹಿಂಬಾಲಿಸುವೆನು” ಅಂದನು. ಅದಕ್ಕೆ ಎಲೀಯನು “ಹೋಗು ನಾನು ನಿನಗೆ ಮಾಡಿರುವುದನ್ನು ಮರೆಯಬೇಡ?” ಎಂದು ಉತ್ತರಕೊಟ್ಟನು. 21ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ವಧಿಸಿ ಮಾಂಸವನ್ನು ರಂಟೆಯ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಸೇವಕನಾದನು. 2:1ಯೆಹೋವನು ಎಲೀಯನನ್ನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಸೇರಿಸಿಕೊಳ್ಳುವ ಸಮಯ ಬಂದಾಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು. 6ಎಲೀಯನು ತಿರುಗಿ ಅವನಿಗೆ, “ನೀನು ಇಲ್ಲೇ ಇರು. ಯೆಹೋವನು ನನಗೆ ಯೊರ್ದನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಅದಕ್ಕೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಅನಂತರ ಅವರಿಬ್ಬರೂ ಹೊರಟು ಯೊರ್ದನ್ ಹೊಳೆಯ ದಡಕ್ಕೆ ಬಂದರು. 7ಪ್ರವಾದಿ ಮಂಡಳಿಯವರಲ್ಲಿ ಐವತ್ತು ಜನರು ಇವರ ಹಿಂದಿನಿಂದಲೇ ಬಂದು ಯೊರ್ದನಿಗೆ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡರು. 8ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು. 9ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟು ಹೋಗುವ ಮೊದಲು, ನಾನು ನಿನಗೋಸ್ಕರ ಏನು ಮಾಡಬೇಕೆನ್ನುತ್ತೀ ಹೇಳು” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿನಗಿರುವ ಆತ್ಮದಲ್ಲಿ ನನಗೆ ಎರಡರಷ್ಟು ಪಾಲನ್ನು ಅನುಗ್ರಹಿಸು” ಎಂದು ಬೇಡಿಕೊಂಡನು. 10ಆಗ ಎಲೀಯನು ಅವನಿಗೆ, “ನೀನು ಕಷ್ಟಕರವಾದುದ್ದನ್ನು ಕೇಳಿಕೊಂಡಿರುವೆ. ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವುದಾದರೆ ಅದು ನಿನಗೆ ದೊರಕುವುದು. ಇಲ್ಲವಾದರೆ ದೊರಕುವುದಿಲ್ಲ” ಎಂದನು. 11ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ, ಪಕ್ಕನೆ ಅಗ್ನಿಮಯವಾದ ರಥಗಳು ನಡುವೆ ಬಂದು ಅವರಿಬ್ಬರನ್ನು ಬೇರ್ಪಡಿಸಿದವು. ಎಲೀಯನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಏರಿ ಹೋದನು. 12ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು. 13ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಯೊರ್ದನ್ ನದಿ ತೀರಕ್ಕೆ ಬಂದು, 14“ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.
ಉದಯಕಾಲದ ಪ್ರಾರ್ಥನೆ: ಸುವಾರ್ತೆ
22ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. 23ಅದಕ್ಕೆ ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ’ ಎಂಬ ಗಾದೆಯನ್ನು ನನಗೆ ನಿಸ್ಸಂದೇಹವಾಗಿ ಹೇಳಿ; ಕಪೆರ್ನೌಮಿನಲ್ಲಿ ನೀನು ಮಾಡಿದ ಕಾರ್ಯಗಳನ್ನು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿಯೂ ಮಾಡು ಎಂದು ಹೇಳುವಿರಿ. 24ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 25ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರಗಾಲ ಉಂಟಾದಾಗ, ಇಸ್ರಾಯೇಲಿನಲ್ಲೇ ಅನೇಕ ವಿಧವೆಯರು ಇದ್ದದ್ದು ನಿಜ; 26ಆದರೆ ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ, ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಅವನನ್ನು ಕಳುಹಿಸಿದನು. 27ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು. 28ಸಭಾಮಂದಿರದಲ್ಲಿದ್ದ ಎಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು, 29ಎದ್ದು ಆತನನ್ನು ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರು ಕಟ್ಟಲ್ಪಟ್ಟಿದ್ದ ಗುಡ್ಡದ ಅಂಚಿಗೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಿಬಿಡಬೇಕೆಂದಿದ್ದರು. 30ಆದರೆ ಆತನು ಅವರ ಮಧ್ಯದಿಂದ ನಡೆದು ತನ್ನ ಪಾಡಿಗೆ ತಾನು ಹೊರಟು ಹೋದನು.
ಪತ್ರಿಕೆ
9ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ. 10ಅದು ಈ ಲೋಕದಲ್ಲಿರುವ ಜಾರರು, ಆಸೆಬುರುಕರು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಮೊದಲಾದವರ ಸಹವಾಸವನ್ನು ಬಿಟ್ಟುಬಿಡಬೇಕೆಂಬ ಅರ್ಥದಲ್ಲಿ ಅಲ್ಲ; ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು. 11ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ. 12ಸಭೆಯ ಹೊರಗಿರುವವರನ್ನು ತೀರ್ಪುಮಾಡುವುದಕ್ಕೆ ನನಗೇನಧಿಕಾರವಿದೆ? ಒಳಗಿನವರನ್ನು ತೀರ್ಪುಮಾಡುವವರು ನೀವೇ ಅಲ್ಲವೇ. 13ಹೊರಗಿರುವವರನ್ನು ತೀರ್ಪುಮಾಡುವವನು ದೇವರು. “ನಿಮ್ಮ ಮಧ್ಯದಲ್ಲಿರುವ ಆ ದುಷ್ಟ ವ್ಯಕ್ತಿಯನ್ನು ತೆಗೆದುಹಾಕಿರಿ.” 6:1ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ? 2ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ? 3ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ? 4ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನಿಮ್ಮಲ್ಲಿದ್ದರೆ, ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಏಕೆ ನೇಮಿಸಿಕೊಳ್ಳುತ್ತೀರಿ? 5ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ? 6ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ? 7ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು? 8ಆದರೆ ನೀವು ನಿಮ್ಮ ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ. 9ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು, 10ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
ಪತ್ರಿಕೆ (ಪ್ರವಾದಿ ಎಲೀಯ)
10ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. 11ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ. 12ಮುಖ್ಯವಾಗಿ ನನ್ನ ಸಹೋದರರೇ, ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. 13ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ. 14ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. 15ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ ಪಾಪಗಳನ್ನು ಕ್ಷಮಿಸುವನು. 16ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ. 17ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. 18ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು. 19ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; 20ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.
ಸುವಾರ್ತೆ
54ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು? 55ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ? 56ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು. 57ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು. 58ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.
ಸುವಾರ್ತೆ (ಪ್ರವಾದಿ ಎಲೀಯ)
22ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. 23ಅದಕ್ಕೆ ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ’ ಎಂಬ ಗಾದೆಯನ್ನು ನನಗೆ ನಿಸ್ಸಂದೇಹವಾಗಿ ಹೇಳಿ; ಕಪೆರ್ನೌಮಿನಲ್ಲಿ ನೀನು ಮಾಡಿದ ಕಾರ್ಯಗಳನ್ನು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿಯೂ ಮಾಡು ಎಂದು ಹೇಳುವಿರಿ. 24ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 25ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರಗಾಲ ಉಂಟಾದಾಗ, ಇಸ್ರಾಯೇಲಿನಲ್ಲೇ ಅನೇಕ ವಿಧವೆಯರು ಇದ್ದದ್ದು ನಿಜ; 26ಆದರೆ ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ, ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಅವನನ್ನು ಕಳುಹಿಸಿದನು. 27ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು. 28ಸಭಾಮಂದಿರದಲ್ಲಿದ್ದ ಎಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು, 29ಎದ್ದು ಆತನನ್ನು ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರು ಕಟ್ಟಲ್ಪಟ್ಟಿದ್ದ ಗುಡ್ಡದ ಅಂಚಿಗೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಿಬಿಡಬೇಕೆಂದಿದ್ದರು. 30ಆದರೆ ಆತನು ಅವರ ಮಧ್ಯದಿಂದ ನಡೆದು ತನ್ನ ಪಾಡಿಗೆ ತಾನು ಹೊರಟು ಹೋದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 20 ಜುಲೈ ಎಂದರೆ ನಾಗರಿಕ ಪಂಚಾಂಗದ 2 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು