ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 1 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 1 ಆಗಸ್ಟ್ 2027
ಭಾನುವಾರ · ಸಾಮಾನ್ಯ ಕಾಲದ 18ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 18ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
2ಆಗ ಇಸ್ರಾಯೇಲರ ಸಮೂಹವೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟತೊಡಗಿದರು. 3ಇಸ್ರಾಯೇಲರು ಮೋಶೆ ಮತ್ತು ಆರೋನರಿಗೆ, “ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ನಮ್ಮನ್ನು ಈ ಮರುಭೂಮಿಗೆ ಕರೆದುಕೊಂಡು ಬಂದಿದ್ದೀರಿ. ನಾವು ಐಗುಪ್ತ ದೇಶದಲ್ಲಿದ್ದಾಗ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಹೊಟ್ಟೆತುಂಬಾ ರೊಟ್ಟಿಯನ್ನು ತಿನ್ನುತ್ತಿದ್ದಾಗ ಯೆಹೋವನ ಕೈಯಿಂದ ಸತ್ತು ಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು” ಎಂದರು. 4ಆಗ ಯೆಹೋವನು ಮೋಶೆಗೆ, “ನಾನು ಆಕಾಶದಿಂದ ನಿಮಗಾಗಿ ಆಹಾರವನ್ನು ಸುರಿಸುತ್ತೇನೆ. ಜನರು ಪ್ರತಿದಿನವೂ ಹೊರಗೆ ಹೋಗಿ ಆ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಅವರು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುತ್ತೇನೆ. 12“ಇಸ್ರಾಯೇಲರ ಗುಣುಗುಟ್ಟುವಿಕೆಯು ನನಗೆ ಕೇಳಿಸಿತು. ನೀನು ಅವರಿಗೆ, ‘ನೀವು ಸಾಯಂಕಾಲದಲ್ಲಿ ಮಾಂಸವನ್ನೂ, ಮುಂಜಾನೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂಬುದು ನಿಮಗೆ ಗೊತ್ತಾಗುವುದೆಂದು ಹೇಳಬೇಕು’” ಎಂಬುದೇ. 13ಸಾಯಂಕಾಲವಾಗುತ್ತಲೇ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ತುಂಬಿಕೊಂಡವು. ಅದಲ್ಲದೆ ಹೊತ್ತಾರೆಯಲ್ಲಿ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು. 14ಆ ಮಂಜು ಕರಗಿ ಹೋದ ಮೇಲೆ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು. 15ಇಸ್ರಾಯೇಲರು ಅದನ್ನು ಕಂಡು ಒಬ್ಬರಿಗೊಬ್ಬರು, “ಇದೇನಿರಬಹುದು?” ಎಂದು ಅಂದುಕೊಂಡರು. ಅದು ಏನೆಂದು ಅವರಿಗೆ ತಿಳಿಯಲಿಲ್ಲ. ಮೋಶೆ ಅವರಿಗೆ, “ಇದು ಯೆಹೋವನು ನಿಮಗಾಗಿ ತಿನ್ನುವುದಕ್ಕೆ ಕೊಟ್ಟಿರುವ ರೊಟ್ಟಿಯಾಗಿದೆ.
ಪ್ರತಿವಚನ ಕೀರ್ತನೆ
3ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು, ಅವರ ಸಂತಾನದವರಿಗೆ ಮರೆಮಾಡದೆ, 4ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು, ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು. 23ಆತನು ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು, 24ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ, ಉಣ್ಣಲಿಕ್ಕೆ ಕೊಟ್ಟನು. 25ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಸೇವಿಸಿದನು. ಆತನು ಅವರಿಗೆ ಭೋಜನವನ್ನು ಸಂತೃಪ್ತಿಯಾಗಿ ಅನುಗ್ರಹಿಸಿದನು. 54ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.
ಎರಡನೆಯ ವಾಚನ
17ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. 20ನೀವಾದರೋ ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. 21ಆತನಿಂದಲೇ ಕೇಳಿ ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. 22ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. 23ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. 24ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
ಸುವಾರ್ತೆ
24ಹೀಗಿರಲಾಗಿ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ಅರಿತು ತಾವೇ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು. 25ಮತ್ತು ಸಮುದ್ರದ ಆಚೆಕಡೆಯಲ್ಲಿ ಆತನನ್ನು ಕಂಡು “ಗುರುವೇ, ಯಾವಾಗ ಇಲ್ಲಿಗೆ ಬಂದಿ?” ಎಂದು ಕೇಳಿದರು. 26ಯೇಸು ಅವರಿಗೆ “ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ. 27ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ” ಎಂದನು. 28ಅವರು ಆತನಿಗೆ “ದೇವರ ಕ್ರಿಯೆಗಳನ್ನು ನಾವು ಮಾಡಬೇಕಾದರೆ ಏನು ಮಾಡಬೇಕೆಂದು” ಕೇಳಿದ್ದಕ್ಕೆ, 29ಯೇಸುವು, “ದೇವರ ಕ್ರಿಯೆ ಯಾವುದೆಂದರೆ, ಆತನು ಕಳುಹಿಸಿಕೊಟ್ಟಾತನನ್ನು ನೀವು ನಂಬುವುದೇ” ಎಂದನು. 30ಅವರು ಆತನನ್ನು “ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕಕಾರ್ಯ ಮಾಡುತ್ತೀ? ನೀನು ಏನುಮಾಡುತ್ತಿ? 31ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ, 32ಯೇಸು ಅವರಿಗೆ “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ, ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. 33ದೇವರು ಕೊಡುವ ಆ ರೊಟ್ಟಿ ಯಾವುದೆಂದರೆ, ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದ್ದೇ” ಎಂದು ಹೇಳಿದನು. 34ಆಗ ಅವರು “ಆಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದರು. 35ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ.
ಇಂದಿನ ಸಂತರು
- ಸಂತ ಅಲ್ಫೊನ್ಸಸ್ ಲಿಗೋರಿ, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು