Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 19 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಜುಲೈ 2027

ಸೋಮವಾರ · ಸಾಮಾನ್ಯ ಕಾಲದ 16ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 16ನೇ ವಾರದ ಸೋಮವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 14:5–18

5ಇಸ್ರಾಯೇಲರು ಓಡಿಹೋದರೆಂಬ ವರ್ತಮಾನವು ಐಗುಪ್ತದ ಅರಸನಾದ ಫರೋಹನಿಗೆ ತಿಳಿದುಬಂದಾಗ, ಅವರ ವಿಷಯದಲ್ಲಿ ಫರೋಹನ ಮತ್ತು ಅವನ ಪರಿವಾರದವರ ಹೃದಯವು ಅವರಿಗೆ ವಿರುದ್ಧವಾಗಿ ಕಠಿಣಗೊಂಡಿತು. ಅವರು, “ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲರನ್ನು ಹೊರಟು ಹೋಗುವುದಕ್ಕೆ ಬಿಟ್ಟೆವಲ್ಲಾ” ಎಂದುಕೊಂಡರು. 6ಆಗ ಫರೋಹನು ತನ್ನ ರಥಬಲವನ್ನು ಸಿದ್ಧಪಡಿಸಿಕೊಂಡು ತನ್ನ ಭಟರೊಡನೆ ಹೊರಟನು. 7ಶ್ರೇಷ್ಠವಾದ ಆರುನೂರು ರಥಗಳನ್ನೂ, ಐಗುಪ್ತ ದೇಶದ ಎಲ್ಲಾ ರಥಗಳನ್ನೂ ತೆಗೆದುಕೊಂಡು ಬೆನ್ನಟ್ಟಿ ಹೋದನು. ಆ ಎಲ್ಲಾ ರಥಗಳಲ್ಲಿ ಅಧಿಪತಿಗಳನ್ನೂ ಕರೆಸಿ ಕೊಂಡನು. 8ಯೆಹೋವನು ಐಗುಪ್ತ ದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಇಸ್ರಾಯೇಲರನ್ನು ಬೆನ್ನಟ್ಟಿಹೋದನು. ಆದರೆ ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಹೊರಟು ಬಂದಿದ್ದರು. 9ಐಗುಪ್ತ್ಯರು ಅಂದರೆ ಫರೋಹನ ಕುದುರೆಗಳೂ, ರಥಗಳೂ, ಅವನ ರಾಹುತರೂ, ಸೈನ್ಯದವರೆಲ್ಲರೂ ಅವರ ಹಿಂದೆ ಹೊರಟು ಇಸ್ರಾಯೇಲರು ಪೀಹಹೀರೋತಿನ ಹತ್ತಿರ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುತ್ತಿರುವಾಗಲೇ ಅವರ ಸಮೀಪಕ್ಕೆ ಬಂದರು. 10ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲರು ಕಣ್ಣೆತ್ತಿ ತಮ್ಮ ಹಿಂದೆ ಹೊರಟು ಬಂದಿದ್ದ ಐಗುಪ್ತ್ಯರನ್ನು ಕಂಡು, ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು. 11ಅವರು ಮೋಶೆಗೆ, “ಐಗುಪ್ತ ದೇಶದಲ್ಲಿ ಸಮಾಧಿಗಳಿರಲಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿ ಎಂದು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯೋ? ಯಾಕೆ ನೀನು ನಮಗೆ ಈ ರೀತಿಮಾಡಿ ಐಗುಪ್ತ ದೇಶದಿಂದ ಕರೆದುಕೊಂಡು ಬಂದೆ? 12ನಾವು ಐಗುಪ್ತ ದೇಶದಲ್ಲಿರುವಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ. ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು’ ಎಂಬುದಾಗಿ ನಿನಗೆ ಹೇಳಲಿಲ್ಲವೇ. ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವುದೇ ಮೇಲಲ್ಲವೇ” ಎಂದು ಹೇಳಿದರು. 13ಆದರೆ ಮೋಶೆ ಆ ಜನರಿಗೆ, “ನೀವು ಅಂಜಬೇಡಿರಿ. ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ. 14ಯೆಹೋವನೇ ನಿಮಗಾಗಿ ಯುದ್ಧಮಾಡುವನು. ನೀವಂತು ಸುಮ್ಮನೇ ನಿಂತುಕೊಂಡಿರಿ” ಎಂದು ಹೇಳಿದನು. 15ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು. 16ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು. 17ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು. 18ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು.

ಪ್ರತಿವಚನ ಕೀರ್ತನೆ

ವಿಮೋ 15:1–6

1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು: “ಯೆಹೋವನಿಗೆ ಸ್ತೋತ್ರ ಗಾನಮಾಡೋಣ; ಆತನು ಮಹಾಜಯಶಾಲಿಯಾದವನು. ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. 2ನನ್ನ ಬಲವೂ, ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು. 3ಯೆಹೋವನು ಯುದ್ಧವೀರನು; ಯೆಹೋವ ಎಂಬುದು ಆತನ ನಾಮವಾಗಿದೆ. 4ಆತನು ಫರೋಹನ ರಥಗಳನ್ನೂ, ಸ್ಯೆನಿಕರನ್ನೂ ಸಮುದ್ರದಲ್ಲಿ ಕೆಡವಿಹಾಕಿದನು. ಫರೋಹನ ಶ್ರೇಷ್ಠ ವೀರರನ್ನು ಕೆಂಪುಸಮುದ್ರದಲ್ಲಿ ಮುಳುಗಿಸಿ ಬಿಟ್ಟನು. 5ಆಳವಾದ ಸಾಗರವು ಅವರನ್ನು ಮುಚ್ಚಿಬಿಟ್ಟಿತು. ಅವರು ಕಲ್ಲಿನಂತೆ ಸಮುದ್ರದ ತಳವನ್ನು ಸೇರಿದರು. 6ಯೆಹೋವನೇ, ನಿನ್ನ ಬಲಗೈಯಲ್ಲಿರುವ ಶಕ್ತಿ ಎಷ್ಟೋ ಮಹಿಮೆಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಬಲಗೈ ಶತ್ರುಗಳನ್ನು ಪುಡಿಪುಡಿಮಾಡಿಬಿಡುತ್ತದೆ.

ಸುವಾರ್ತೆ

ಮತ್ತಾ 12:38–42

38ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ, 39“ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತಾರೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ. 40ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು. 41ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು. 42ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು