Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 18 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 18 ಜುಲೈ 2027

ಭಾನುವಾರ · ಸಾಮಾನ್ಯ ಕಾಲದ 16ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 16ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಯೆರೆ 23:1–6

1“ನನ್ನ ಕಾವಲಿನ ಕುರಿಗಳನ್ನು ಚದುರಿಸಿ ಹಾಳು ಮಾಡುವ ಕುರುಬರ ಗತಿಯನ್ನು ಏನೆಂದು ಹೇಳಲಿ” ಎಂಬುದು ಯೆಹೋವನ ನುಡಿ. 2ಇಸ್ರಾಯೇಲರ ದೇವರಾದ ಯೆಹೋವನು ತನ್ನ ಜನರೆಂಬ ಕುರಿಗಳನ್ನು ಮೇಯಿಸುವ ಕುರುಬರ ದ್ರೋಹವನ್ನು ಕಂಡು ಅವರನ್ನು ಕುರಿತು ಇಂತೆನ್ನುತ್ತಾನೆ, “ನೀವು ನನ್ನ ಮಂದೆಯನ್ನು ಚದರಿಸಿ ಅಟ್ಟಿಬಿಟ್ಟಿದ್ದೀರಿ, ವಿಚಾರಿಸಲೇ ಇಲ್ಲ. ಆಹಾ, ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಾನು ನಿಮ್ಮನ್ನು ವಿಚಾರಿಸುವೆನು. 3ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು. 4ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು. ಅವು ಇನ್ನು ಕಳವಳಗೊಳ್ಳುವುದಿಲ್ಲ, ಭಯಪಡುವುದಿಲ್ಲ ಮತ್ತು ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ; ಇದು ಯೆಹೋವನ ನುಡಿ” ಎಂಬುದೇ. 5ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು. 6ಅವನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು, ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು” ಎಂದು ನುಡಿಯುತ್ತಾನೆ.

ಪ್ರತಿವಚನ ಕೀರ್ತನೆ

ಕೀರ್ತ 23:1–6

1ದಾವೀದನ ಕೀರ್ತನೆ. ಯೆಹೋವನು ನನಗೆ ಕುರುಬನು; ಕೊರತೆಪಡೆನು. 2ಆತನು ಹಸಿರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. 3ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಯ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ. 4ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ಮತ್ತು ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ. 5ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ; ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ, ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ. 6ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಮತ್ತು ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.

ಎರಡನೆಯ ವಾಚನ

ಎಫೆ 2:13–18

13ಈಗಲಾದರೋ, ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ. 14ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ. 15ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ. 16ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ ಇಲ್ಲವಾಗಿಸಿ, ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ. 17ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 18ಇದರಿಂದ ಆತನ ಮೂಲಕ ಉಭಯತ್ರರು ಒಂದೇ ಆತ್ಮನಲ್ಲಿ ತಂದೆಯ ಬಳಿಗೆ ಪ್ರವೇಶಿಸಲು ಮಾರ್ಗವಾಯಿತು.

ಸುವಾರ್ತೆ

ಮಾರ್ಕ 6:30–34

30ಅಪೊಸ್ತಲರು ಯೇಸುವಿನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಆತನಿಗೆ ತಿಳಿಸಿದರು. 31ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. 32ಆಗ ಅವರು ತಾವಾಗಿಯೇ ದೋಣಿಯಲ್ಲಿ ಹೊರಟು ಏಕಾಂತ ಸ್ಥಳಕ್ಕೆ ಹೋದರು. 33ಆದರೆ ಅವರು ಹೋಗುವುದನ್ನು ಬಹು ಜನರು ನೋಡಿ ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮೊದಲೇ ಅಲ್ಲಿ ಸೇರಿದರು. 34ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು