Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 20 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 20 ಜುಲೈ 2027

ಮಂಗಳವಾರ · ಸಾಮಾನ್ಯ ಕಾಲದ 16ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 16ನೇ ವಾರದ ಮಂಗಳವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಸಂತ ಅಪೊಲಿನಾರಿಸ್, ಧರ್ಮಾಧ್ಯಕ್ಷ ಮತ್ತು ಹುತಾತ್ಮ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 14:21–15:1

21ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು. 22ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು. 23ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು. 24ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು. 25ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು. 26ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು. 27ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು. 28ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. 29ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು. 30ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಐಗುಪ್ತ್ಯರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಾಯೇಲರು ನೋಡಿದರು. 31ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು. 15:1ಆಗ ಮೋಶೆಯೂ, ಇಸ್ರಾಯೇಲರೂ ಯೆಹೋವನನ್ನು ಸ್ತುತಿಸುವುದಕ್ಕಾಗಿ ಈ ಕೀರ್ತನೆಯನ್ನು ಹಾಡಿದರು: “ಯೆಹೋವನಿಗೆ ಸ್ತೋತ್ರ ಗಾನಮಾಡೋಣ; ಆತನು ಮಹಾಜಯಶಾಲಿಯಾದವನು. ಕುದುರೆಗಳನ್ನು ಮತ್ತು ರಾಹುತರನ್ನು ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ.

ಪ್ರತಿವಚನ ಕೀರ್ತನೆ

ವಿಮೋ 15:8–10, 12, 17

8ನಿನ್ನ ಮೂಗಿನ ಶ್ವಾಸದಿಂದ ಸಮುದ್ರದ ನೀರು ಒಟ್ಟುಗೂಡಿದವು; ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು; ಸಾಗರದಾಳದೊಳಗಿನ ನೀರು ಗಟ್ಟಿಯಾಯಿತು. 9ಶತ್ರುವು, ‘ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು; ಅವರಲ್ಲಿ ನಮ್ಮ ಬಯಕೆಯನ್ನು ತೀರಿಸಿಕೊಳ್ಳುವೆವು. ನಾವು ಖಡ್ಗವನ್ನು ಹಿಡಿದು; ಶಕ್ತಿಯಿಂದ ಅವರನ್ನು ಸಂಹಾರಮಾಡುವೆವು’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದರು. 10ಆದರೆ ನೀನು ಗಾಳಿಯನ್ನು ಊದಿದಾಗ, ಸಮುದ್ರವು ಅವರನ್ನು ಮುಚ್ಚಿಕೊಂಡಿತು; ಅವರು ಮಹಾಸಾಗರದೊಳಗೆ ಸೀಸದ ಗುಂಡಿನಂತೆ ಮುಳುಗಿಹೋದರು. 12ನೀನು ನಿನ್ನ ಬಲಗೈಯನ್ನು ಚಾಚಿದಾಗ, ಭೂಮಿಯು ಬಾಯ್ದೆರೆದು ಶತ್ರುಗಳನ್ನು ನುಂಗಿಬಿಟ್ಟಿತಲ್ಲಾ. 17ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಬಲಪಡಿಸುವಿ, ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಕಟ್ಟಿಕೊಂಡಿರುವ ಸ್ಥಳದವರೆಗೂ ಕರ್ತನೇ, ನೀನು ನಿನಗಾಗಿ ಸಿದ್ಧಪಡಿಸಿಕೊಂಡಿರುವ ಪವಿತ್ರ ಪರ್ವತದವರೆಗೂ ಅವರನ್ನು ಬರಮಾಡುವಿ.

ಸುವಾರ್ತೆ

ಮತ್ತಾ 12:46–50

46ಯೇಸು ಜನರ ಗುಂಪುಗಳ ಸಂಗಡ ಇನ್ನೂ ಮಾತನಾಡುತ್ತಿರುವಾಗ ಆತನ ತಾಯಿಯೂ ತಮ್ಮಂದಿರೂ ಆತನನ್ನು ಮಾತನಾಡಿಸಬೇಕೆಂದು ಹೊರಗೆ ಬಂದು ನಿಂತಿದ್ದರು. 47ಆಗ ಒಬ್ಬನು, “ಇಗೋ ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ಮಾತನಾಡಿಸಬೇಕೆಂದು ಹೊರಗೆ ನಿಂತಿದ್ದಾರೆ” ಅಂದನು. 48ಅದಕ್ಕಾತನು ಆ ಮಾತು ಹೇಳಿದವನಿಗೆ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ 49ಶಿಷ್ಯರ ಕಡೆಗೆ ಕೈ ಚಾಚಿ, “ಇಗೋ ನನ್ನ ತಾಯಿ, ನನ್ನ ಸಹೋದರರು. 50ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರನೂ ಸಹೋದರಿಯೂ ತಾಯಿಯೂ ಆಗಿದ್ದಾರೆ” ಅಂದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು