Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 23 ಮೇ

ಆರ್ಥೊಡಾಕ್ಸ್ ಪಂಚಾಂಗ · ಮೇ 10 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 23 ಮೇ 2027

ಭಾನುವಾರ · ಸ್ವರ 3

ಹಬ್ಬಗಳು ಮತ್ತು ಸಂತರು

ಪಾಸ್ಕದ ನಾಲ್ಕನೆಯ ಭಾನುವಾರ

ಪಾರ್ಶ್ವವಾಯು ರೋಗಿಯ ಭಾನುವಾರ

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ

1 ಯೋಹಾ 3:21–4:6

21ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ. 22ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು. 23ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ. 24ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ. 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು. 2ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ. 3ಯೇಸುಕ್ರಿಸ್ತನನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುತ್ತದೆಂಬುದನ್ನು ನೀವು ಕೇಳಿದ್ದೀರಲ್ಲಾ. ಅದು ಈಗಾಗಲೇ ಲೋಕದಲ್ಲಿ ಇದೆ. 4ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ. 5ಅವರು ಲೋಕಸಂಬಂಧಿಗಳಾಗಿದ್ದಾರೆ. ಈ ಕಾರಣದಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ. 6ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.

ಸಂಧ್ಯಾ ಪ್ರಾರ್ಥನೆ: ವಾಚನ

1 ಯೋಹಾ 4:11–16

11ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ. 13ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆ ಮತ್ತು ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ತಿಳಿದುಕೊಳ್ಳುತ್ತೇವೆ. 14ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ. 15ಯೇಸುಕ್ರಿಸ್ತನು ದೇವರ ಮಗನಾಗಿದ್ದಾನೆಂದು ಯಾರು ಒಪ್ಪಿಕೊಳ್ಳುತ್ತಾರೋ ಅವರಲ್ಲಿ ದೇವರು ನೆಲೆಗೊಂಡಿರುತ್ತಾನೆ, ಹಾಗೂ ಅವನು ದೇವರಲ್ಲಿ ನೆಲೆಗೊಂಡಿದ್ದಾನೆ. 16ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ಸಂಧ್ಯಾ ಪ್ರಾರ್ಥನೆ: ವಾಚನ

1 ಯೋಹಾ 4:20–5:5

20ಒಬ್ಬನು, “ತಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತನ್ನೊಂದಿಗೆ ಇರುವ ಸಹೋದರನನ್ನು ಪ್ರೀತಿಸದವನು, ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಬಲ್ಲನು? 21ದೇವರನ್ನು ಪ್ರೀತಿಸುವವನು, ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ. 5:1ಯೇಸುವೇ ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನೂ ದೇವರಿಂದ ಹುಟ್ಟಿದವನಾಗಿದ್ದಾನೆ. ಯಾವನು ತನ್ನನ್ನು ಹುಟ್ಟಿಸಿದ ತಂದೆಯನ್ನು ಪ್ರೀತಿಸುತ್ತಾನೋ, ಅವನು ತಂದೆಯಿಂದ ಹುಟ್ಟಿದವರೆಲ್ಲರನ್ನೂ ಪ್ರೀತಿಸುತ್ತಾನೆ. 2ನಾವು ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ. 3ದೇವರ ಮೇಲಿನ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ. ಆತನ ಆಜ್ಞೆಗಳು ಕಷ್ಟಕರವಾದವುಗಳಲ್ಲ. 4ಏಕೆಂದರೆ ದೇವರಿಂದ ಹುಟ್ಟಿದವನು ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದ್ದು ನಮ್ಮ ನಂಬಿಕೆಯೇ. 5ಯೇಸುಕ್ರಿಸ್ತನು ದೇವರ ಮಗನೆಂದು ಒಪ್ಪಿಕೊಂಡು ನಂಬಿದವರಲ್ಲದೆ ಮತ್ತಾರು ಲೋಕವನ್ನು ಜಯಿಸಿದವರಾಗಿದ್ದಾರೆ?

ಉದಯಕಾಲದ ನಾಲ್ಕನೆಯ ಸುವಾರ್ತೆ

ಲೂಕ 24:1–12

1ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು. 2ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು, 3ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ. 4ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು. 5ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು? 6ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು. 8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು, 9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. 11ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು. 12ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.

ಪತ್ರಿಕೆ

ಅ. ಕೃ 9:32–42

32ಪೇತ್ರನು ಎಲ್ಲಾ ಕಡೆಗಳಲ್ಲಿಯೂ ಸಂಚಾರಮಾಡುತ್ತಿರುವಾಗ, ಲುದ್ದದಲ್ಲಿ ವಾಸವಾಗಿದ್ದ ದೇವಜನರ ಬಳಿಗೂ ಬಂದನು. 33ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು. 34ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು. 35ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು. 36ಯೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ದೊರ್ಕ” ಅಂದರೆ ಜಿಂಕೆ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ, ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು. 37ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು. 38ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು. 39ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು. 40ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು; “ತಬಿಥಾ, ಎದ್ದೇಳು” ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತುಕೊಂಡಳು. 41ಅವನು ಆಕೆಯನ್ನು ಕೈಹಿಡಿದು ಎಬ್ಬಿಸಿ, ಅಲ್ಲಿದ್ದ ವಿಧವೆಯರನ್ನು ಮತ್ತು ದೇವಜನರನ್ನೂ ಕರೆದು, ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು. 42ಈ ಸಂಗತಿಯು ಯೊಪ್ಪದಲ್ಲೆಲ್ಲಾ ಹರಡಿ ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು.

ಪತ್ರಿಕೆ (ಸಂತ ಸಿಮೆಯೋನ)

1 ಕೊರಿ 4:9–16

9ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು. 10ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು. 11ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ, 12ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. 13ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ. 14ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. 15ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ. 16ಆದ್ದರಿಂದ ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಸುವಾರ್ತೆ

ಯೋಹಾ 5:1–15

1ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು. 2ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. 3ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.) 5ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. 6ಅವನು ಬಿದ್ದುಕೊಂಡಿರುವುದನ್ನು ಯೇಸು ನೋಡಿ ಇವನಿಗೆ ಹೀಗಾಗಿ ಬಹು ಕಾಲವಾಗಿದೆ ಎಂದು ಅರಿತು ಅವನಿಗೆ “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು. 7ಅದಕ್ಕೆ ಆ ರೋಗಿಯು “ಆಯ್ಯಾ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ಯಾರೂ ಇಲ್ಲ. ನಾನು ಹೋಗುವುದರೊಳಗೆ ನನಗಿಂತ ಮೊದಲು ಮತ್ತೊಬ್ಬನು ಇಳಿಯುತ್ತಾನೆ” ಎಂದನು. 8ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ” ಎಂದು ಹೇಳಿದನು. 9ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು, 10ಆದುದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ, “ಈ ದಿನ ಸಬ್ಬತ್ ದಿನವಾದುದರಿಂದ ನೀನು ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆಯೆಂದು” ಹೇಳಿದ್ದಕ್ಕೆ, 11ಅವನು, “ನನ್ನನ್ನು ಸ್ವಸ್ಥಮಾಡಿದವನೇ ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದನು” ಎಂದನು. 12ಅದಕ್ಕೆ ಯೆಹೂದ್ಯರು ಅವನಿಗೆ, “ಅದನ್ನು ಎತ್ತಿಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು. 13ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ, ಏಕೆಂದರೆ, ಯೇಸು ಆ ಸ್ಥಳದಲ್ಲಿ ಇದ್ದ ಜನರ ಗುಂಪಿನ ಮಧ್ಯದಲ್ಲಿ ಮರೆಯಾದನು. 14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು. 15ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು.

ಸುವಾರ್ತೆ (ಸಂತ ಸಿಮೆಯೋನ)

ಮತ್ತಾ 13:54–58

54ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು? 55ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ? 56ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು. 57ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು. 58ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 10 ಮೇ ಎಂದರೆ ನಾಗರಿಕ ಪಂಚಾಂಗದ 23 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು