Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 24 ಮೇ

ಆರ್ಥೊಡಾಕ್ಸ್ ಪಂಚಾಂಗ · ಮೇ 11 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 24 ಮೇ 2027

ಸೋಮವಾರ · ಪಾಸ್ಕದ ನಾಲ್ಕನೆಯ ವಾರ · ಸ್ವರ 3

ಹಬ್ಬಗಳು ಮತ್ತು ಸಂತರು

Hieromartyr Mocius the Presbyter of Amphipolis in Macedonia († c.295)

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 10; ಜ್ಞಾನೋ 3; ಜ್ಞಾನೋ 8 (ಆರಿಸಿದ ವಚನಗಳು)

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 10:31–11:12

31ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, ನೀಚನ ನಾಲಿಗೆ ಕತ್ತರಿಸಲ್ಪಡುವುದು. 32ಶಿಷ್ಟನ ತುಟಿಯಲ್ಲಿ ಹಿತವಚನ, ದುಷ್ಟನ ಬಾಯಲ್ಲಿ ನೀಚವಚನ. 11:1ಮೋಸದ ತಕ್ಕಡಿ ಯೆಹೋವನಿಗೆ ಅಸಹ್ಯ, ನ್ಯಾಯದ ತೂಕ ಆತನಿಗೆ ಸಂತೋಷ. 2ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ, ದೀನತೆಯಲ್ಲಿ ಸುಜ್ಞಾನ. 3ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ, ವಂಚಕರಿಗೆ ವಕ್ರತೆಯು ನಾಶನ. 4ಧನವು ಕೋಪದ ದಿನದಲ್ಲಿ ವ್ಯರ್ಥ, ಧರ್ಮವು ಮರಣವಿಮೋಚಕ. 5ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವುದು, ದುಷ್ಟನು ತನ್ನ ದೋಷದಿಂದಲೇ ಬಿದ್ದುಹೋಗುವನು. 6ಧರ್ಮವು ಯಥಾರ್ಥವಂತರನ್ನು ಉದ್ಧರಿಸುವುದು, ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು. 7ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವುದು, ಬಲದ ಮೇಲಣ ನಂಬಿಕೆಯು ಬಿದ್ದುಹೋಗುವುದು. 8ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು, ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು. 9ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು, ಶಿಷ್ಟನು ತಿಳಿವಳಿಕೆಯಿಂದ ಉದ್ಧಾರವಾಗುವನು. 10ಸಜ್ಜನರು ಸುಖಿಗಳಾದರೆ ಪಟ್ಟಣಕ್ಕೆ ಉಲ್ಲಾಸ, ದುರ್ಜನರು ಹಾಳಾದರೆ ಜಯಘೋಷ. 11ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವುದು, ಕೆಟ್ಟವರ ಬಾಯಿಂದ ಕೆಡವಲ್ಪಡುವುದು. 12ನೆರೆಯವನನ್ನು ಹೀನೈಸುವವನು ಬುದ್ಧಿಹೀನನು, ವಿವೇಕಿಯು ಮೌನವಾಗಿರುವನು.

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಉದಯಕಾಲದ ಪ್ರಾರ್ಥನೆ: ಸುವಾರ್ತೆ

ಯೋಹಾ 10:1–9

1“ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ. 2ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು. 3ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ. 4ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ. 5ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ. 6ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ. 7ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ, 8ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.

ಪತ್ರಿಕೆ

ಅ. ಕೃ 10:1–16

1ಕೈಸರೈಯ ಪಟ್ಟಣದಲ್ಲಿ ಇತಾಲ್ಯ ಸೈನ್ಯದ ಶತಾಧಿಪತಿಯಾದ ಕೊರ್ನೆಲ್ಯನೆಂಬ ಒಬ್ಬ ಮನುಷ್ಯನಿದ್ದನು. 2ಅವನು ದೈವಭಕ್ತನೂ, ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವವನು ಆಗಿದ್ದು, ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಾ, ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು. 3ಒಂದು ದಿನ ಮಧ್ಯಾಹ್ನ ಸುಮಾರು ಮೂರು ಘಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು; “ಕೊರ್ನೆಲ್ಯನೇ” ಎಂದು ಕರೆಯುವುದನ್ನು ಅವನು ಪ್ರತ್ಯಕ್ಷವಾಗಿ ಕಂಡನು. 4ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ; “ಕರ್ತನೇ, ಇದೇನು?” ಎಂದು ಕೇಳಲು, ಆ ದೂತನು ಅವನಿಗೆ; “ನಿನ್ನ ಪ್ರಾರ್ಥನೆಗಳೂ, ನಿನ್ನ ದಾನಧರ್ಮಗಳೂ ದೇವರ ಸನ್ನಿಧಿಗೆ ಜ್ಞಾಪರ್ಥಕವಾಗಿ ಬಂದು ತಲುಪಿದೆ. 5ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ, ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು. 6ಅವನು ಚಮ್ಮಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರತೀರದ ಬಳಿಯಲ್ಲಿ ಇದೆ” ಎಂದು ಹೇಳಿದನು. 7ಕೊರ್ನೇಲ್ಯನು ತನ್ನ ಸಂಗಡ ಮಾತನಾಡಿದ ದೇವದೂತನು ಹೊರಟುಹೋದ ಮೇಲೆ, ತನ್ನ ಮನೆಯಲ್ಲಿದ್ದ ಸೇವಕರಲ್ಲಿ ಇಬ್ಬರನ್ನೂ ಮತ್ತು ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೈವಭಕ್ತನನ್ನೂ ಕರೆದು, 8ಅವರಿಗೆ ಈ ಸಂಗತಿಗಳನ್ನೆಲ್ಲಾ ವಿವರವಾಗಿ ಹೇಳಿ, ಅವರನ್ನು ಯೊಪ್ಪ ಎಂಬ ಪಟ್ಟಣಕ್ಕೆ ಕಳುಹಿಸಿದನು. 9ಮರುದಿನ ಅವರು ಪ್ರಯಾಣಮಾಡಿ ಆ ಪಟ್ಟಣದ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರಾರ್ಥನೆಮಾಡುವುದಕ್ಕಾಗಿ ಮಹಡಿಯನ್ನು ಹತ್ತಿದನು. 10ಅವನಿಗೆ ಬಹಳ ಹಸಿವಾಗಿ ಊಟಮಾಡ ಬಯಸಿದನು. ಅವರು ಊಟಕ್ಕೆ ಸಿದ್ಧಮಾಡುತ್ತಿರುವಷ್ಟರಲ್ಲಿ, 11ಅವನು ಧ್ಯಾನಪರವಶನಾಗಿ ಆಕಾಶವು ತೆರೆದಿರುವುದನ್ನೂ, ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವುದನ್ನೂ ಕಂಡನು. 12ಅದರೊಳಗೆ ಸಕಲ ವಿಧವಾದ ಪಶುಗಳೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳೂ ಇದ್ದವು. 13ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ಅವನಿಗೆ ಒಂದು ವಾಣಿ ಕೇಳಿಸಿತು. 14ಅದಕ್ಕೆ ಪೇತ್ರನು; “ಬೇಡವೇ ಬೇಡ ಕರ್ತನೇ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ, ಅಶುದ್ಧವಾದವುಗಳನ್ನಾಗಲಿ ತಿಂದವನಲ್ಲ” ಅಂದನು. 15ಅದಕ್ಕೆ; “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದೆಂದು” ಪುನಃ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು. 16ಹೀಗೆ ಮೂರು ಸಾರಿ ಆಯಿತು. ಆದ ಮೇಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.

ಪತ್ರಿಕೆ (ಸಂತರು)

ಇಬ್ರಿ 7:26–8:2

26ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು. 27ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ. 8:1ನಾವು ಈಗ ಹೇಳುವ ಸಂಗತಿಗಳಲ್ಲಿ ಮುಖ್ಯವಾದ ಮಾತೇನೆಂದರೆ, ಪರಲೋಕದೊಳಗೆ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ. 2ಆತನು ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.

ಸುವಾರ್ತೆ

ಯೋಹಾ 6:56–69

56ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿದಿದ್ದಾನೋ ಅವನು ನನ್ನಲ್ಲಿ ನೆಲೆಸಿರುತ್ತಾನೆ; ನಾನು ಅವನಲ್ಲಿ ನೆಲೆಸಿರುತ್ತೇನೆ. 57ಜೀವವುಳ್ಳ ತಂದೆಯು ನನ್ನನ್ನು ಅಧಿಕಾರದೊಂದಿಗೆ ಕಳುಹಿಸಿಕೊಟ್ಟಿದ್ದಾನೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುತ್ತೇನೆ, ಅದರಂತೆ ನನ್ನನ್ನು ತಿನ್ನುವವನೂ ನನ್ನ ನಿಮಿತ್ತವಾಗಿಯೇ ಜೀವಿಸುವನು. 58ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೇ, ನಿಮ್ಮ ಪೂರ್ವಿಕರು ಮನ್ನಾವನ್ನು ತಿಂದರೂ ಸತ್ತರು, ಆದರೆ, ಈ ರೊಟ್ಟಿಯನ್ನು ತಿನ್ನುವವನು ಸದಾಕಾಲಕ್ಕೂ ಜೀವಿಸುವನು” ಎಂದು ಹೇಳಿದನು. 59ಈ ವಿಷಯಗಳನ್ನು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶ ಮಾಡುವಾಗ ಹೇಳಿದನು. 60ಯೇಸುವಿನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ “ಇದು ಕಠಿಣವಾದ ಮಾತು, ಇದನ್ನು ಪಾಲಿಸುವವರು ಯಾರು?” ಎಂದು ಮಾತನಾಡಿಕೊಂಡರು. 61ತನ್ನ ಶಿಷ್ಯರು ಇದಕ್ಕೆ ಗೊಣಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ “ಈ ಮಾತಿನಿಂದ ನಿಮಗೆ ಬೇಸರವಾಯಿತೋ? 62ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ? 63ಜೀವ ಕೊಡುವುದು ಆತ್ಮವೇ. ದೇಹವು ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ, ಜೀವವಾಗಿಯೂ ಇವೆ. 64ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ” ನಂಬದವರು ಯಾರೆಂದೂ ಹಾಗೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು. 65ಆತನು “ತಂದೆಯು ಅನುಗ್ರಹಿಸದ ಹೊರತು ಯಾರೂ ನನ್ನ ಬಳಿಗೆ ಬರಲಾರರು ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ,” ಎಂದನು. 66ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಆತನನ್ನು ಬಿಟ್ಟು ಹೊರಟುಹೋದರು ಮತ್ತು ಆತನ ಜೊತೆಯಲ್ಲಿ ಸಂಚಾರ ಮಾಡುವುದನ್ನು ಬಿಟ್ಟರು. 67ಆದಕಾರಣ ಯೇಸು ಇದನ್ನು ನೋಡಿ, ತನ್ನ ಹನ್ನೆರಡು ಮಂದಿ ಶಿಷ್ಯಂದಿರಿಗೆ “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಿದ್ದಕ್ಕೆ, 68ಸೀಮೋನ್ ಪೇತ್ರನು ಆತನಿಗೆ “ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳಿವೆಯಲ್ಲಾ. 69ನೀನು ದೇವರಿಂದ ಬಂದ ಅತಿಪರಿಶುದ್ಧನೆಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ” ಎಂದನು.

ಸುವಾರ್ತೆ (ಸಂತರು)

ಮತ್ತಾ 5:14–19

14ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು. 15ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು. 16ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. 17“ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ. 18ನಿಮಗೆ ಸತ್ಯವಾಗಿ ಹೇಳುತ್ತೇನೆ, ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮನಿಯಮವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಚುಕ್ಕೆಯಾಗಲಿ, ಒಂದು ಅಕ್ಷರವಾಗಲಿ ಅಳಿದುಹೋಗುವುದಿಲ್ಲ. 19ಆದುದರಿಂದ ಈ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ನಡೆದು ಜನರಿಗೂ ಹಾಗೆ ಮಾಡುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಕನಿಷ್ಠನೆನ್ನಿಸಿಕೊಳ್ಳುವನು; ಆದರೆ ತಾನೇ ಸ್ವತಃ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ಶ್ರೇಷ್ಠನೆನಿಸಿಕೊಳ್ಳುವನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 11 ಮೇ ಎಂದರೆ ನಾಗರಿಕ ಪಂಚಾಂಗದ 24 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು