ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 7 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 25 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 7 ಏಪ್ರಿಲ್ 2027
ಬುಧವಾರ · ಮಹಾ ಉಪವಾಸದ ನಾಲ್ಕನೆಯ ವಾರ · ಸ್ವರ 3
ಹಬ್ಬಗಳು ಮತ್ತು ಸಂತರು
The Annunciation of our Most Holy Lady, Theotokos and Ever-Virgin Mary
ಮಹಾ ಉಪವಾಸ ಕಾಲ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಉದಯಕಾಲದ ಪ್ರಾರ್ಥನೆ: ಸುವಾರ್ತೆ (ಶುಭಸಂದೇಶ)
39ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು. 40ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು. 41ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು. 42ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. 43ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು? 44ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು. 45ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.” 46ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ, 47ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ. 48ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು, 49ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು. 56ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.
ಆರನೆಯ ತಾಸು
21ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪ ಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ಪ್ರಕಟಮಾಡುವುದು, ತನ್ನ ನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಡುವುದಿಲ್ಲ.” 27:1ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ, ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು. 2ಆ ದಿನದಲ್ಲಿ ಫಲಭರಿತ ದ್ರಾಕ್ಷಿಯ ತೋಟದ ವಿಷಯವಾಗಿ ಹಾಡಿರಿ, 3“ಯೆಹೋವನಾದ ನಾನೇ ಅದನ್ನು ಕಾಯುತ್ತೇನೆ. ಪ್ರತಿ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ಹಗಲಿರುಳೂ ಕಾಯುತ್ತೇನೆ. 4ರೌದ್ರವು ನನ್ನಲ್ಲಿಲ್ಲ; ದತ್ತೂರಿ ಮತ್ತು ಮುಳ್ಳು ನನಗೆ ಎದುರುಬಿದ್ದರೆ, ಅವುಗಳಿಗೆ ವಿರುದ್ಧವಾಗಿ ಯುದ್ಧಮಾಡಿ, ಒಟ್ಟಿಗೆ ಸುಟ್ಟುಬಿಡುವೆನು. 5ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನ ಸಂಗಡ ಸಮಾಧಾನ ಮಾಡಿಕೊಳ್ಳಲಿ. 6ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು, ಇಸ್ರಾಯೇಲು ಹೂಬಿಟ್ಟು ಚಿಗುರುವುದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವುದು.” 7ಯೆಹೋವನು ಬೇರೆ ದೇಶಗಳನ್ನು ಹೊಡೆದಂತೆ ತನ್ನ ಪ್ರಜೆಯಾದ ಯಾಕೋಬ ಮತ್ತು ಇಸ್ರಾಯೇಲರನ್ನು ಹೊಡೆದನೋ? ಇತರ ದೇಶದವರು ಸಂಹರಿಸಲ್ಪಟ್ಟಂತೆ ಯಾಕೋಬ ಮತ್ತು ಇಸ್ರಾಯೇಲರು ಸಂಹರಿಸಲ್ಪಟ್ಟರೋ? 8ನಿನ್ನ ಪ್ರಜೆಯನ್ನು ಕಳುಹಿಸಿಬಿಡುವದರ ಮೂಲಕ ಅದರೊಡನೆ ಮಿತಿಮೀರದೆ ಹೋರಾಡುತ್ತಿದ್ದೀ; ಮೂಡಣದಿಂದ ಗಾಳಿಯು ಬೀಸುವ ದಿನದಲ್ಲಿ ಅದರ ಕ್ರೂರ ಹೊಡೆತದಿಂದ ನಿನ್ನ ಜನರನ್ನು ಹೊರಗೆ ಕಳುಹಿಸಿದೆ. 9ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿ ಮಾಡಿ, ಅಶೇರವೆಂಬ ವಿಗ್ರಹಸ್ತಂಭಗಳನ್ನೂ, ಸೂರ್ಯಸ್ತಂಭಗಳನ್ನೂ ಪ್ರತಿಷ್ಠಿಸದೆ ನಾಶಮಾಡಿ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವಂತೆ ಮಾಡಿದನು ಮತ್ತು ಅವರ ಪಾಪ ಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದಾಗಿದೆ.
ಸಂಧ್ಯಾ ಪ್ರಾರ್ಥನೆ: ವಾಚನ
18ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು. 19ಈ ಮೂವರು ನೋಹನ ಮಕ್ಕಳು. ಇವರಿಂದಲೇ ಜನರು ಉತ್ಪತ್ತಿಯಾಗಿ ಭೂಮಿಯಲ್ಲೆಲ್ಲಾ ಹರಡಿಕೊಂಡರು. 20ನೋಹನು ವ್ಯವಸಾಯಗಾರನಾಗಿದ್ದನು; ದ್ರಾಕ್ಷಿ ತೋಟ ಮಾಡುವುದನ್ನು ಮೊದಲು ಪ್ರಾರಂಭಿಸಿದವನು ಇವನೇ. 21ಒಂದು ದಿನ ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. 22ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು, ಹೊರಗಿದ್ದ ತನ್ನ ಸಹೋದರರಾದ ಶೇಮ್ ಮತ್ತು ಯೆಫೆತರಿಗೆ ತಿಳಿಸಿದನು. 23ಆಗ ಶೇಮ್ ಮತ್ತು ಯೆಫೆತರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂಭಾಗವಾಗಿ ನಡೆದು ತಂದೆಗೆ ಹೊದಿಸಿ ಅವನ ಬೆತ್ತಲೆತನವನ್ನು ಮುಚ್ಚಿದರು. ಅವರು ಹಿಮ್ಮುಖರಾಗಿದ್ದುದ್ದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ. 24ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು ಕಿರಿಯ ಮಗನು ಮಾಡಿದ್ದನ್ನು ತಿಳಿದು, 25“ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ” ಎಂದನು. 26ಅವನು ಇನ್ನೂ ನುಡಿದದ್ದೇನೆಂದರೆ, “ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಕಾನಾನನು ಅವರಿಗೆ ದಾಸನಾಗಿರಲಿ. 27ಯೆಫೆತನ ಮೇರೆಯನ್ನು ದೇವರು ವಿಸ್ತರಿಸಲಿ, ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ, ಕಾನಾನನು ಅವರಿಗೆ ದಾಸನಾಗಿರಲಿ” ಎಂದನು. 28ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರ್ಷ ಬದುಕಿದನು. 29ನೋಹನು ಒಂಭೈನೂರ ಐವತ್ತು ವರ್ಷ ಬದುಕಿ ಸತ್ತನು. 10:1ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು.
ಸಂಧ್ಯಾ ಪ್ರಾರ್ಥನೆ: ವಾಚನ
23ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು. 24ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು. 25ಕಳವಳವು ಮನಸ್ಸನ್ನು ಕುಗ್ಗಿಸುವುದು, ಕನಿಕರದ ಮಾತು ಅದನ್ನು ಹಿಗ್ಗಿಸುವುದು. 26ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು. 27ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು. 28ಧರ್ಮಮಾರ್ಗದಿಂದ ಜೀವಲಾಭವು, ಆ ಮಾರ್ಗದಲ್ಲಿ ಮರಣವಿಲ್ಲ. 13:1ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು. 2ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ. 3ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು. 4ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ. 5ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ. 6ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು. 7ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ. 8ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ. 9ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.
ಸಂಧ್ಯಾ ಪ್ರಾರ್ಥನೆ: ವಾಚನ (ಶುಭಸಂದೇಶ)
1ಮೋಶೆಯು ತನ್ನ ಮಾವನಾದ, ಮಿದ್ಯಾನ್ಯರ ಯಾಜಕನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರಲಾಗಿ ಆ ಮಂದೆಯನ್ನು ಅಡವಿಯ ಮತ್ತೊಂದುಭಾಗಕ್ಕೆ ನಡಿಸಿಕೊಂಡು ಹೋಗುತ್ತಾ, “ಹೋರೇಬ್” ಎಂಬ ದೇವರ ಬೆಟ್ಟಕ್ಕೆ ಬಂದನು. 2ಆಗ ಯೆಹೋವನ ದೂತನು ಮುಳ್ಳಿನ ಪೊದೆಯೊಳಗಿನಿಂದ ಉರಿಯುವ ಬೆಂಕಿ ಜ್ವಾಲೆಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ಕಣ್ಣೆತ್ತಿ ನೋಡಿದಾಗ, ಆ ಮುಳ್ಳಿನ ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು; ಆದರೆ ಅದು ಸುಟ್ಟು ಹೋಗಲಿಲ್ಲ. 3ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆಯು ಸುಟ್ಟು ಹೋಗುತ್ತಿಲ್ಲವಲ್ಲಾ! ಇದನ್ನು ಹತ್ತಿರಕ್ಕೆ ಹೋಗಿ ನೋಡುವೆನು” ಅಂದುಕೊಂಡನು. 4ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು. 5ದೇವರು ಅವನಿಗೆ, “ನೀನು ಪೊದೆಯ ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ” ಎಂದು ಹೇಳಿದನು. 6ಇದಲ್ಲದೆ ಆತನು ಅವನಿಗೆ, “ನಾನು ನಿನ್ನ ತಂದೆಯಾದ, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರೂ ಆಗಿದ್ದೇನೆ” ಎಂದು ಹೇಳಿದನು. ಮೋಶೆಯು ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. 7ಆಗ ಯೆಹೋವನು, “ಐಗುಪ್ತ ದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಿಶ್ಚಯವಾಗಿ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡುವ ವಿಷಯದಲ್ಲಿ, ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. 8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ಬಿಡಿಸುವುದಕ್ಕೂ ಆ ದೇಶದಿಂದ ಅವರನ್ನು ಹಾಲೂ ಮತ್ತು ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ.
ಸಂಧ್ಯಾ ಪ್ರಾರ್ಥನೆ: ವಾಚನ (ಶುಭಸಂದೇಶ)
22ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ. 23ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು. 24ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು. 25ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ, 26ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು. 27ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು. 28ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು. 29ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ, 30ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,
ಪತ್ರಿಕೆ (ಶುಭಸಂದೇಶ)
11ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ. 12“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ, 13“ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ. 14ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, 15ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. 16ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ. 17ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು. 18ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.
ಸುವಾರ್ತೆ (ಶುಭಸಂದೇಶ)
24ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು. 25“ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು. 26ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು; 27ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು. 28ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು. 29ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು. 30ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ. 31ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. 32ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. 33ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು. 34ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು. 35ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು. 36ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು. 37ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು. 38ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 25 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 7 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು