ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 16 ಮಾರ್ಚ್
ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 3 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 16 ಮಾರ್ಚ್ 2027
ಮಂಗಳವಾರ · ಮಹಾ ಉಪವಾಸದ ಮೊದಲನೆಯ ವಾರ · ಸ್ವರ 8
ಹಬ್ಬಗಳು ಮತ್ತು ಸಂತರು
Martyrs Eutropius, Cleonicus and Basiliscus of Amasea († c. 308)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ. 20ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ” ಈ ಮಾತನ್ನು ಯೆಹೋವನೇ ನುಡಿದಿದ್ದಾನೆ. 21ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ ಈಗ ಕೊಲೆಪಾತಕರಿಗೆ ನೆಲೆಯಾಗಿದೆ. 22ನಿನ್ನ ಬೆಳ್ಳಿಯು ಅಶುದ್ಧವಾಯಿತು. ನಿನ್ನ ದ್ರಾಕ್ಷಾರಸವು ನೀರಾಯಿತು. 23ನಿನ್ನ ಅಧಿಕಾರಿಗಳು ದ್ರೋಹಿಗಳೂ, ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಪ್ರೀತಿಸಿ, ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸುವುದಿಲ್ಲ; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು. 24ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ, “ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು. 25ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಪುಟಕ್ಕೆ ಹಾಕಿ, ನಿನ್ನ ಹೊಲಸುತನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಬಿಡುವೆನು. 26ಪೂರ್ವದಲ್ಲಿ ನಿನಗಿದ್ದ ನ್ಯಾಯಾಧಿಪತಿಗಳನ್ನು, ಮಂತ್ರಾಲೋಚಕರನ್ನು ಪುನಃ ಒದಗಿಸಿಕೊಡುವೆನು. ಆ ಮೇಲೆ ನೀನು ಸದಾಚಾರದ ನಗರಿ ಎಂತಲೂ, ಸ್ವಾಮಿ ನಿಷ್ಠೆಯುಳ್ಳ ನಗರಿ ಎಂತಲೂ ಕರೆಯಲ್ಪಡುವಿ.” 27ಚೀಯೋನ್ ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ತಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು. 28ಆದರೆ ದ್ರೋಹಿಗಳೂ ಮತ್ತು ಪಾಪಿಗಳೂ ಒಟ್ಟಾಗಿ ನಾಶವಾಗುವರು. ಹೌದು, ಯೆಹೋವನನ್ನು ತೊರೆದವರು ನಾಶವಾಗುವರು. 29“ನೀವು ಇಷ್ಟಪಟ್ಟ ಏಲಾ ಮರಗಳ ನಿಮಿತ್ತ ನಾಚಿಕೆಪಡುವಿರಿ. ಗೊತ್ತು ಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ. 30ಎಲೆ ಒಣಗಿದ ಏಲಾ ಮರದಂತೆಯೂ, ನೀರಿಲ್ಲದ ವನದ ಹಾಗೂ ಇರುವಿರಿ. 31ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕಾರ್ಯವೇ ಕಿಡಿ, ಎರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.” 2:1ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡು ಬಂದ ದೈವೋಕ್ತಿ ಇದೇ. 2ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. 3ಹೊರಟು ಬಂದ ಬಹು ಜನಾಂಗದವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು. ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವುದು.
ಸಂಧ್ಯಾ ಪ್ರಾರ್ಥನೆ: ವಾಚನ
14ಬಳಿಕ ದೇವರು, “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ. ಅವು ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. 15ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು. 16ದೇವರು ಹಗಲನ್ನಾಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಾಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟು ಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟು ಮಾಡಿದನು. 17ದೇವರು ಆ ಬೆಳಕುಗಳನ್ನು ಆಕಾಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ 18ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು. 19ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು. 20ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿ ಹಾರಾಡಲಿ” ಎಂದು ಹೇಳಿದನು. 21ಹೀಗೆ ದೇವರು ಮಹಾ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು. 22ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು. 23ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.
ಸಂಧ್ಯಾ ಪ್ರಾರ್ಥನೆ: ವಾಚನ
20ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಮಾಡುತ್ತಾಳೆ. 21ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ, ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ, 22“ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು? ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು? 23ನನ್ನ ಗದರಿಕೆಗೆ ಲಕ್ಷ್ಯಕೊಡಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು. 24ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ; 25ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ. 26ಆದಕಾರಣ ಬಿರುಗಾಳಿಯಂತೆ ಅಪಾಯವೂ, ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ 27ನಿಮ್ಮ ಅಪಾಯದಲ್ಲಿ ನಾನೂ ನಗುವೆನು; ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು. 28ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು, ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು. 29ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು. 30ನನ್ನ ಬೋಧನೆಯನ್ನು ಕೇಳಲೊಲ್ಲದೆ, ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು. 31ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ, ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು. 32ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು. 33ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು, ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 3 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 16 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು