ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 16 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಮಾರ್ಚ್ 2027
ಮಂಗಳವಾರ · ತಪಸ್ಸು ಕಾಲದ ಐದನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಐದನೆಯ ವಾರದ ಮಂಗಳವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
4ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡುವಾಗ, ದಾರಿಯಲ್ಲಿ ಆಯಾಸದಿಂದ ಅವರಿಗೆ ಬೇಸರವಾಯಿತು. 5ಆಗ ಅವರು ದೇವರಿಗೂ ಮತ್ತು ಮೋಶೆಗೂ ವಿರುದ್ಧವಾಗಿ ಮಾತನಾಡಿ, “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ರುಚಿ ಇಲ್ಲದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು. 6ಅದಕ್ಕೆ ಯೆಹೋವನು ವಿಷಸರ್ಪಗಳನ್ನು ಇಸ್ರಾಯೇಲ್ ಜನರೊಳಗೆ ಬರಮಾಡಿದನು. ಅವು ಜನರನ್ನು ಕಚ್ಚಿದ್ದರಿಂದ ಬಹಳಜನರು ಸತ್ತುಹೋದರು. 7ಆದುದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಮತ್ತು ಯೆಹೋವನಿಗೂ ವಿರುದ್ಧವಾಗಿ ಮಾತನಾಡಿ ದ್ರೋಹಿಗಳಾದೆವು. ಈ ಸರ್ಪಗಳು ನಮ್ಮ ಬಳಿಯಿಂದ ತೊಲಗಿಹೋಗುವಂತೆ ನೀನು ಯೆಹೋವನಿಗೆ ಪ್ರಾರ್ಥನೆಮಾಡಬೇಕು” ಎಂದು ಬೇಡಿಕೊಂಡರು. 8ಮೋಶೆ ಜನರಿಗೋಸ್ಕರ ಪ್ರಾರ್ಥಿಸಲಾಗಿ ಯೆಹೋವನು ಅವನಿಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು. ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು” ಎಂದು ಆಜ್ಞಾಪಿಸಿದನು. 9ಆದಕಾರಣ ಮೋಶೆ ತಾಮ್ರದಿಂದ ಸರ್ಪವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಟ್ಟನು. ಸರ್ಪದಿಂದ ಗಾಯಪಟ್ಟವರಲ್ಲಿ ಯಾರು ಆ ತಾಮ್ರದ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
ಪ್ರತಿವಚನ ಕೀರ್ತನೆ
1ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ. 2ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು. 15ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ, 16ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ, 17ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು. 18ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ, 19“ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ. 20ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,
ಸುವಾರ್ತೆ
21ಯೇಸು ತಿರುಗಿ ಅವರಿಗೆ, “ನಾನು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ ಮತ್ತು ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದನು. 22ಅದಕ್ಕೆ ಯೆಹೂದ್ಯರು, “ನಾವು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?” ಎಂದು ಮಾತನಾಡಿಕೊಂಡರು. 23ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ. 24ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವು ನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು. 25ಆಗ ಅವರು ಆತನಿಗೆ, “ನೀನು ಯಾರು?” ಎನ್ನಲೂ, ಯೇಸು ಅವರಿಗೆ, “ಮೊದಲಿನಿಂದಲೇ ನಾನು ನಿಮಗೆ ಹೇಳಿದಂಥದ್ದೇ. 26ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು. 27ಆತನು ತಂದೆಯ ಕುರಿತಾಗಿ ಅವರೊಂದಿಗೆ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ. 28ಹೀಗಿರಲಾಗಿ ಯೇಸು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೆತ್ತಿದಾಗ, ನಾನೇ ಆತನೆಂದೂ, ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನೆಂದು ನೀವು ತಿಳಿದುಕೊಳ್ಳುವಿರಿ. ಆದರೆ ನನ್ನ ತಂದೆಯು ನನಗೆ ಬೋಧಿಸಿದ ಸಂಗತಿಗಳನ್ನೇ ಮಾತನಾಡುತ್ತೇನೆ. 29ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ, ಆತನು ನನ್ನನ್ನು ಒಬ್ಬಂಟಿಗನಾಗಿ ಬಿಡುವುದಿಲ್ಲ” ಎಂದನು. 30ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು