Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 10 ಮಾರ್ಚ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 10 ಮಾರ್ಚ್ 2027

ಬುಧವಾರ · ತಪಸ್ಸು ಕಾಲದ ನಾಲ್ಕನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ನಾಲ್ಕನೆಯ ವಾರದ ಬುಧವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 49:8–15

8ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ. 9ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು. 10ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು. 11ನನ್ನ ಬೆಟ್ಟಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು. 12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ. 13ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.” 14ಚೀಯೋನ್ ನಗರಿಯಾದರೋ, “ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನೆ” ಎಂದುಕೊಂಡಳು. 15ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 145:8–9, 13–14, 17–18

8ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ. 9ಯೆಹೋವನು ಸರ್ವೋಪಕಾರಿಯು, ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ. 13ನಿನ್ನ ರಾಜ್ಯವು ಶಾಶ್ವತವಾಗಿದೆ, ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವುದು. 14ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ, ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ. 17ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು. 18ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಸುವಾರ್ತೆ

ಯೋಹಾ 5:17–30

17ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯು ಇಂದಿನವರೆಗೂ ಕೆಲಸ ಮಾಡುತ್ತಿದ್ದಾನೆ, ನಾನೂ ಕೆಲಸ ಮಾಡುತ್ತೇನೆ” ಎಂದು ಹೇಳಿದನು. 18ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು. 19ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆಯೇ, ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ಆತನು ಯಾವುದನ್ನೆಲ್ಲಾ ಮಾಡುವನೋ ಹಾಗೆಯೇ ಮಗನೂ ಮಾಡುತ್ತಾನೆ. 20ಏಕೆಂದರೆ, ತಂದೆಯು ಮಗನನ್ನು ಪ್ರೀತಿಸುತ್ತಾನೆ, ತಾನು ಮಾಡುವುದನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು. ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವುದು. 21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ. 22ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ. 23ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು. 24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. 25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು. 26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ. 27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ. 28ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗ ಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ, 29ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು. 30“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು