Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 9 ಮಾರ್ಚ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 9 ಮಾರ್ಚ್ 2027

ಮಂಗಳವಾರ · ತಪಸ್ಸು ಕಾಲದ ನಾಲ್ಕನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ನಾಲ್ಕನೆಯ ವಾರದ ಮಂಗಳವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ನೇರಳೆ

ರೋಮಿನ ಸಂತ ಫ್ರಾನ್ಸೆಸ್, ಸನ್ಯಾಸಿನಿ · ಸ್ಮರಣೋಲ್ಲೇಖ

ದಿನದ ವಾಚನಗಳು

ಮೊದಲನೆಯ ವಾಚನ

ಯೆಹೆ 47:1–9, 12

1ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು. 2ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು. 3ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವಕ್ಕೆ ಮುಂದುವರಿದು ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸಿದನು. ಅಲ್ಲಿ ನೀರು ಕಾಲು ಮುಳುಗುವಷ್ಟಿತ್ತು. 4ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಸೊಂಟದವರೆಗೆ ಇತ್ತು. 5ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು. 6ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ನದಿಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. 7ನಾನು ಹಿಂದಿರುಗಲು ಆಹಾ, ನದಿಯ ಎರಡು ದಡಗಳಲ್ಲಿಯೂ ಅನೇಕ ವೃಕ್ಷಗಳು ಕಾಣಿಸಿದವು. 8ಆಗ ಅವನು ನನಗೆ ಹೀಗೆ ಹೇಳಿದನು, “ಈ ಪ್ರವಾಹವು ಪೂರ್ವ ಪ್ರಾಂತ್ಯಕ್ಕೆ ಹೊರಟು, ಅರಾಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ಈ ನೀರು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. 9ಈ ನದಿಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲ ವಿಧವಾದ ಜಲಜಂತುಗಳು ಬದುಕಿ ಬಾಳುವವು; ಮೀನುಗಳು ಗುಂಪು ಗುಂಪಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು, ಆ ನೀರೂ ಸಿಹಿಯಾಗುವುದು. ಈ ನದಿಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. 12ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”

ಪ್ರತಿವಚನ ಕೀರ್ತನೆ

ಕೀರ್ತ 46:1–2, 4–5, 7–8

11 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು. ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. 2ಆದುದರಿಂದ ಭೂಮಿಯು ಮಾರ್ಪಟ್ಟರೂ, ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ, ನಮಗೇನೂ ಭಯವಿಲ್ಲ. 4ಒಂದು ನದಿ ಇದೆ; ಅದರ ಕಾಲುವೆಗಳು, ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ, ದೇವರ ನಗರವನ್ನು ಸಂತೋಷಪಡಿಸುತ್ತವೆ. 5ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು. 7ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ 8ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.

ಸುವಾರ್ತೆ

ಯೋಹಾ 5:1–16

1ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು. 2ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. 3ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.) 5ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. 6ಅವನು ಬಿದ್ದುಕೊಂಡಿರುವುದನ್ನು ಯೇಸು ನೋಡಿ ಇವನಿಗೆ ಹೀಗಾಗಿ ಬಹು ಕಾಲವಾಗಿದೆ ಎಂದು ಅರಿತು ಅವನಿಗೆ “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು. 7ಅದಕ್ಕೆ ಆ ರೋಗಿಯು “ಆಯ್ಯಾ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ಯಾರೂ ಇಲ್ಲ. ನಾನು ಹೋಗುವುದರೊಳಗೆ ನನಗಿಂತ ಮೊದಲು ಮತ್ತೊಬ್ಬನು ಇಳಿಯುತ್ತಾನೆ” ಎಂದನು. 8ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ” ಎಂದು ಹೇಳಿದನು. 9ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು, 10ಆದುದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ, “ಈ ದಿನ ಸಬ್ಬತ್ ದಿನವಾದುದರಿಂದ ನೀನು ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆಯೆಂದು” ಹೇಳಿದ್ದಕ್ಕೆ, 11ಅವನು, “ನನ್ನನ್ನು ಸ್ವಸ್ಥಮಾಡಿದವನೇ ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ನನಗೆ ಹೇಳಿದನು” ಎಂದನು. 12ಅದಕ್ಕೆ ಯೆಹೂದ್ಯರು ಅವನಿಗೆ, “ಅದನ್ನು ಎತ್ತಿಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು?” ಎಂದು ಕೇಳಿದರು. 13ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ, ಏಕೆಂದರೆ, ಯೇಸು ಆ ಸ್ಥಳದಲ್ಲಿ ಇದ್ದ ಜನರ ಗುಂಪಿನ ಮಧ್ಯದಲ್ಲಿ ಮರೆಯಾದನು. 14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡು, “ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪ ಮಾಡಬೇಡ, ನಿನಗೆ ಹೆಚ್ಚಿನ ಕೇಡು ಬಂದೀತು” ಎಂದನು. 15ಆ ಮನುಷ್ಯನು ಅಲ್ಲಿಂದ ಹೋಗಿ, ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು. 16ಆದಕಾರಣ ಯೆಹೂದ್ಯರು, ಯೇಸು ಸಬ್ಬತ್ ದಿನಗಳಲ್ಲಿ ಇಂಥಾ ಕಾರ್ಯಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸತೊಡಗಿದರು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು