Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 8 ಮಾರ್ಚ್

ಆರ್ಥೊಡಾಕ್ಸ್ ಪಂಚಾಂಗ · ಫೆಬ್ರವರಿ 23 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 8 ಮಾರ್ಚ್ 2027

ಸೋಮವಾರ · ಗಿಣ್ಣಿನ ವಾರ · ಸ್ವರ 7

ಹಬ್ಬಗಳು ಮತ್ತು ಸಂತರು

ಗಿಣ್ಣಿನ ವಾರದ ಸೋಮವಾರ

ಗಿಣ್ಣಿನ ವಾರ

ಮಾಂಸವಿಲ್ಲ; ಹಾಲಿನ ಪದಾರ್ಥ, ಮೊಟ್ಟೆ ಮತ್ತು ಮೀನಿಗೆ ಅನುಮತಿ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

3 ಯೋಹಾ 1:1–15

1ಸಭೆಯ ಹಿರಿಯನಾದ ನಾನು, ಪೂರ್ಣಹೃದಯದಿಂದ ಪ್ರೀತಿಸುವ ಪ್ರಿಯ ಗಾಯನಿಗೆ ಬರೆಯುವುದೇನಂದರೆ; 2ಪ್ರಿಯನೇ, ನೀನು, ನಿನ್ನ ಆತ್ಮ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ, ಸುಕ್ಷೇಮವಾಗಿ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 3ಸಹೋದರರು ಆಗಾಗ್ಗೆ ನನ್ನ ಬಳಿಗೆ ಬಂದು, ನಿನ್ನಲ್ಲಿರುವ ಸತ್ಯವನ್ನು ಕುರಿತು ಮತ್ತು ನೀನು ಸತ್ಯವಂತನಾಗಿ ಜೀವಿಸುವವನು ಎಂದು ಹೇಳುವುದನ್ನು ಕೇಳುವಾಗ, ನಾನು ಬಹಳ ಸಂತೋಷಪಟ್ಟೆನು. 4ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ. 5ಪ್ರಿಯನೇ, ನೀನು ಸಹೋದರರಿಗೂ ಅದಕ್ಕಿಂತಲೂ ಹೆಚ್ಚಾಗಿ ಅತಿಥಿಗಳನ್ನು ಸತ್ಕಾರ ಮಾಡುವುದರಲ್ಲಿ ನಂಬಿಗಸ್ತನಾಗಿ ನಡೆಯುತ್ತಿರುವಿ. 6ಅವರು ಸಭೆಯ ಮುಂದೆ ನೀನು ತೋರಿಸಿದ ಪ್ರೀತಿಯ ಕುರಿತು ಸಾಕ್ಷಿ ಹೇಳಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು. 7ಏಕೆಂದರೆ, ಅವರು ಕ್ರಿಸ್ತನ ಹೆಸರನ್ನು ಪ್ರಚುರಪಡಿಸುವ ನಿಮಿತ್ತವಾಗಿ ಹೊರಟಿದ್ದಾರೆ. ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ. 8ಆದುದರಿಂದ, ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ, ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ. 9ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ. 10ಆದಕಾರಣ, ನಾನು ಅಲ್ಲಿಗೆ ಬಂದಾಗ ಅವನು ಮಾಡುವ ಕೃತ್ಯಗಳನ್ನು ಕುರಿತು ಎಲ್ಲರಿಗೂ ತಿಳಿಸುವೆನು. ಅವನು ಹರಟೆಕೊಚ್ಚುವವನಾಗಿ, ನಮ್ಮ ವಿಷಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ ಯಾವ ಸಹೋದರರನ್ನು ಸೇರಿಸಿಕೊಳ್ಳುವುದಿಲ್ಲ ಹಾಗೂ ನಾನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ. 11ಪ್ರಿಯನೇ, ನೀನು ಕೆಟ್ಟ ನಡತೆಯನ್ನು ಅನುಸರಿಸದೆ, ಒಳ್ಳೆಯ ನಡತೆಯನ್ನು ಅನುಸರಿಸು; ಒಳ್ಳೆಯದನ್ನು ಮಾಡುವವನು ದೇವರ ಮಗನಾಗಿರುತ್ತಾನೆ. ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ. 12ದೇಮೇತ್ರಿಯನು ಎಲ್ಲರಿಂದಲೂ, ಒಳ್ಳೆಯವನೆಂದು ಗುರುತಿಸಲ್ಪಟ್ಟಿದ್ದಾನೆ. ಅಲ್ಲದೆ ಸಾಕ್ಷಿಹೊಂದಿದವನಾಗಿದ್ದಾನೆ. ಅಷ್ಟೇ ಅಲ್ಲದೆ ನಾವು ಅವನ ಪರವಾಗಿ ಸಾಕ್ಷಿಕೊಡುತ್ತದೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲವನಾಗಿದ್ದೀಯ. 13ನಾನು ನಿನಗೆ ಬರೆಯಬೇಕಾದ ಅನೇಕ ವಿಷಯಗಳಿವೆ, ಆದರೆ ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗಿಷ್ಟವಿಲ್ಲ. 14ನಾನು ಬೇಗನೆ ಬಂದು ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಾವು ಮುಖಾ ಮುಖಿಯಾಗಿ ಮಾತನಾಡೋಣ. 15ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಅಲ್ಲಿರುವ ಪ್ರತಿಯೊಬ್ಬ ಸ್ನೇಹಿತರೆಲ್ಲರನ್ನೂ ಹೆಸರಿಸಿ ವಂದಿಸು.

ಸುವಾರ್ತೆ

ಲೂಕ 19:29–40; 22:7–39

29ಅನಂತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು, 30“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ, ಅದರೊಳಗೆ ಹೋಗುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ. ಇದುವರೆಗೆ ಅದರ ಮೇಲೆ ಯಾರೂ ಹತ್ತಿರುವುದಿಲ್ಲ, ಅದನ್ನು ಬಿಚ್ಚಿ ಕರೆತನ್ನಿರಿ. 31ಯಾವನಾದರೂ ನಿಮ್ಮನ್ನು ‘ಮರಿಯನ್ನು ಯಾಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ ‘ಇದು ಕರ್ತನಿಗೆ ಬೇಕಾಗಿದೆ ಅನ್ನಿರಿ’” ಎಂದು ಹೇಳಿಕಳುಹಿಸಿದನು. 32ಕಳುಹಿಸಲ್ಪಟ್ಟವರು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು. 33ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ ಅದರ ಯಜಮಾನನು, “ಈ ಮರಿಯನ್ನು ಯಾಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದ್ದಕ್ಕೆ 34ಅವರು, “ಇದು ಕರ್ತನಿಗೆ ಬೇಕಾಗಿದೆ” ಎಂದು ಹೇಳಿದರು. 35ಅದನ್ನು ಯೇಸುವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಆ ಕತ್ತೆಮರಿಯ ಮೇಲೆ ಹಾಕಿ ಯೇಸುವನ್ನು ಕುಳ್ಳಿರಿಸಿದರು. 36ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. 37ಆತನು ಪಟ್ಟಣವನ್ನು ಸಮೀಪಿಸಿ ಎಣ್ಣೆಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಬಂದಾಗ ಶಿಷ್ಯರ ಗುಂಪೆಲ್ಲಾ ಸಂತೋಷಪಡುತ್ತಾ ತಾವು ಕಂಡಿದ್ದ ಎಲ್ಲಾ ಮಹತ್ಕಾರ್ಯಗಳ ವಿಷಯದಲ್ಲಿ, 38“ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಸಮಾಧಾನ, ಮೇಲಣಲೋಕಗಳಲ್ಲಿ ಮಹಿಮೆ” ಎಂದು ಮಹಾ ಶಬ್ದದಿಂದ ದೇವರನ್ನು ಕೊಂಡಾಡುವುದಕ್ಕೆ ತೊಡಗಿದರು. 39ಜನರ ಗುಂಪಿನೊಳಗಿದ್ದ ಫರಿಸಾಯರಲ್ಲಿ ಕೆಲವರು ಆತನಿಗೆ, “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು” ಎಂದು ಹೇಳಿದ್ದಕ್ಕೆ, 40ಆತನು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು” ಎಂದು ನಿಮಗೆ ಹೇಳುತ್ತೇನೆ ಅಂದನು. 22:7ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ, 8ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು. 9ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು, 10ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ, 11ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ. 12ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು. 13ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು. 14ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು. 15ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ. 16ಇನ್ನು ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು. 17ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ. 18ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು. 19ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು. 20ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. 21“ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ. 22ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು. 23ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 24ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು. 25ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ. 26ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. 27ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. 28ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. 29ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; 30ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ. 31“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು. 32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು. 33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು, 34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು. 35ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು. 36ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. 37ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು. 38ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು. 39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 23 ಫೆಬ್ರವರಿ ಎಂದರೆ ನಾಗರಿಕ ಪಂಚಾಂಗದ 8 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು