ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 9 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 9 ಜನವರಿ 2027
ಶನಿವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಕರ್ತನ ಪ್ರತ್ಯಕ್ಷತೆಯ ಹಬ್ಬದ ನಂತರದ ಶನಿವಾರ
ವಾರದ ದಿನ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
11ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ. 13ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆ ಮತ್ತು ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ತಿಳಿದುಕೊಳ್ಳುತ್ತೇವೆ. 14ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವುದನ್ನು ನಾವು ತಿಳಿದಿದ್ದೇವೆ ಮತ್ತು ಅದರ ವಿಷಯದಲ್ಲಿ ನಾವು ಸಾಕ್ಷಿ ಹೇಳುತ್ತೇವೆ. 15ಯೇಸುಕ್ರಿಸ್ತನು ದೇವರ ಮಗನಾಗಿದ್ದಾನೆಂದು ಯಾರು ಒಪ್ಪಿಕೊಳ್ಳುತ್ತಾರೋ ಅವರಲ್ಲಿ ದೇವರು ನೆಲೆಗೊಂಡಿರುತ್ತಾನೆ, ಹಾಗೂ ಅವನು ದೇವರಲ್ಲಿ ನೆಲೆಗೊಂಡಿದ್ದಾನೆ. 16ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ. 17ನ್ಯಾಯತೀರ್ಪಿನ ದಿನದಲ್ಲಿ ನಾವು ಧೈರ್ಯದಿಂದಿರುವುದಕ್ಕಾಗಿ ಆತನ ಪ್ರೀತಿಯು ನಮ್ಮೊಳಗೆ ಪೂರ್ಣಗೊಂಡಿದೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ. 18ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ.
ಪ್ರತಿವಚನ ಕೀರ್ತನೆ
1ಸೊಲೊಮೋನನ ಕೀರ್ತನೆ. ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು; ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು. 2ಅವನು ನಿನ್ನ ಜನರಿಗೆ ನೀತಿಯಿಂದಲೂ, ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ. 10ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ. 11ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ; ಸರ್ವಜನಾಂಗಗಳು ಆತನನ್ನು ಸೇವಿಸಲಿ. 12ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ, ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. 13ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.
ಸುವಾರ್ತೆ
45ಇದಾದ ಕೂಡಲೆ ಯೇಸು ತನ್ನ ಶಿಷ್ಯರಿಗೆ, ನಾನು ಈ ಜನರ ಗುಂಪನ್ನು ಕಳುಹಿಸಿ ಬಿಡುವಷ್ಟರೊಳಗೆ ನೀವು ದೋಣಿಯನ್ನ ಹತ್ತಿ ಮುಂದಾಗಿ ಆಚೇದಡಕ್ಕೆ ಬೇತ್ಸಾಯಿದಕ್ಕೆ ಹೋಗಿರಿ ಎಂದು ಬಲವಂತಮಾಡಿದನು. 46ಆತನು ಜನರನ್ನು ಕಳುಹಿಸಿಕೊಟ್ಟ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. 47ಸಂಜೆಯಾದಾಗ ದೋಣಿಯು ಸಮುದ್ರದ ನಡುವೆ ಇತ್ತು; ಯೇಸು ಒಬ್ಬನೇ ದಡದಲ್ಲಿದ್ದನು. 48ಎದುರು ಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಗೋಲು ಹಾಕಿ ದಣಿದು ಹೋದದ್ದನ್ನು ಯೇಸು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. 49ಆದರೆ ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಏಕೆಂದರೆ ಅವರೆಲ್ಲರೂ ಆತನನ್ನು ನೋಡಿ ಭಯಭೀತರಾಗಿದ್ದರು. 50ಕೂಡಲೆ ಆತನು ಅವರನ್ನು ಮಾತನಾಡಿಸಿ ಅವರಿಗೆ, “ಧೈರ್ಯವಾಗಿರಿ, ನಾನೇ, ಹೆದರಬೇಡಿರಿ” ಎಂದು ಹೇಳಿದನು. 51ತರುವಾಯ ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಆ ಬಿರುಗಾಳಿಯು ನಿಂತುಹೋಯಿತು. ಆಗ ಅವರು ತಮ್ಮೊಳಗೆ ಬಹು ಆಶ್ಚರ್ಯಪಟ್ಟರು. 52ಏಕೆಂದರೆ ಅವರು ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು ಗ್ರಹಿಸಿರಲಿಲ್ಲ; ಅವರ ಹೃದಯವು ಕಠಿಣವಾಗಿತ್ತು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು