Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 9 ಜನವರಿ

ಆರ್ಥೊಡಾಕ್ಸ್ ಪಂಚಾಂಗ · ಡಿಸೆಂಬರ್ 27 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 9 ಜನವರಿ 2027

ಶನಿವಾರ · ಪಂಚಾಶತ್ತಮದ ನಂತರದ 32ನೇ ವಾರ · ಸ್ವರ 6

ಹಬ್ಬಗಳು ಮತ್ತು ಸಂತರು

ಕ್ರಿಸ್ತ ಜನನದ ನಂತರದ ಶನಿವಾರ

ಕ್ರಿಸ್ಮಸ್ ಕಾಲ (ಸ್ವ್ಯಾತ್ಕಿ)

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ (ಕ್ರಿಸ್ತ ಜನನದ ನಂತರದ ಶನಿವಾರ)

1 ತಿಮೊ 6:11–16

11ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು. 12ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ. ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ. 13ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ, 14ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು. 15ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, ರಾಜಾಧಿರಾಜನೂ, ಕರ್ತಾಧಿಕರ್ತನೂ, 16ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.

ಪತ್ರಿಕೆ

1 ಥೆಸ 5:14–23

14ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ. 15ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ. 16ಯಾವಾಗಲೂ ಸಂತೋಷಿಸಿರಿ, 17ಎಡೆಬಿಡದೆ ಪ್ರಾರ್ಥನೆಮಾಡಿರಿ, 18ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ. 19ಪವಿತ್ರಾತ್ಮನನ್ನು ನಂದಿಸಬೇಡಿ, 20ಪ್ರವಾದನೆಗಳನ್ನು ಹಿನೈಸಬೇಡಿರಿ. 21ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ. 22ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ. 23ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

ಪತ್ರಿಕೆ (ಸಂತ ಸ್ತೆಫನ)

ಅ. ಕೃ 6:8–7:5, 47–60

8ಸ್ತೆಫನನು ದೇವರ ಕೃಪೆಯಿಂದಲೂ, ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತ ಕಾರ್ಯಗಳನ್ನೂ, ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು. 9ಆದರೆ ಲಿಬೆರ್ತೀನರೆಂಬವರ ಸಮಾಜಕ್ಕೆ ಸೇರಿದ ಕುರೇನ್ಯದವರು ಮತ್ತು ಅಲೆಕ್ಸಾಂದ್ರಿಯದವರು, ಕಿಲಿಕ್ಯ ಮತ್ತು ಆಸ್ಯ ಸೀಮೆಗಳಿಂದ ಬಂದವರಲ್ಲಿ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇದ್ದರು. 10ಅವನ ಮಾತಿನಲ್ಲಿ ಕಂಡುಬರುತ್ತಿದ್ದ ಜ್ಞಾನವನ್ನೂ, ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು. 11ಆಗ ಅವರು ಕೆಲವು ಜನರಿಗೆ, “ಇವನು ಮೋಶೆಗೆ ವಿರೋಧವಾಗಿಯೂ, ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನಾಡುವುದನ್ನು ಕೇಳಿದೆವೆಂದು” ಹೇಳಿರಿ ಎಂದು ಕೆಲವರನ್ನು ಮನವೊಲಿಸಿದರು. 12ಅವರು ಜನರನ್ನೂ, ಹಿರಿಯರನ್ನೂ, ಶಾಸ್ತ್ರಿಗಳನ್ನೂ ಪ್ರಚೋದಿಸಿದರು ಮತ್ತು ಅವನನ್ನು ಹಿಡಿದು, ಎಳೆದುಕೊಂಡು, ಹಿರೀಸಭೆಗೆ ತೆಗೆದುಕೊಂಡು ಹೋಗಿ ಅವನಿಗೆ ವಿರುದ್ಧವಾಗಿ ಸುಳ್ಳುಸಾಕ್ಷಿಗಳನ್ನು ಕರತಂದು ನಿಲ್ಲಿಸಿದರು. 13ಆ ಸಾಕ್ಷಿಗಳು, “ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ, ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತನಾಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು. 14ಆ ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿ, ಮೋಶೆ ನಮಗೆ ನೇಮಿಸಿರುವ ಆಚಾರಗಳನ್ನು ಬೇರೆ ಮಾಡುವನೆಂಬುದಾಗಿ ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಅಂದರು. 15ಆಗ ಹಿರೀಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಇರುವುದನ್ನು ಕಂಡರು. 7:1ಆಗ ಮಹಾಯಾಜಕನು, “ಈ ಸಂಗತಿಗಳು ಸತ್ಯವೋ?” ಎಂದು ಸ್ತೆಫನನನ್ನು ಕೇಳಿದ್ದಕ್ಕೆ ಅವನು, “ಸಹೋದರರೇ, ತಂದೆಗಳೇ, ಕೇಳಿರಿ. 2ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಅವನಿಗೆ ಕಾಣಿಸಿಕೊಂಡು; 3‘ನೀನು, ನಿನ್ನ ಸ್ವದೇಶವನ್ನೂ, ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು’ ಎಂದು ಹೇಳಿದನು. 4“ಆಗ ಅವನು ಕಲ್ದೀಯರ ದೇಶದಿಂದ ಹೊರಟುಹೋಗಿ, ಖಾರಾನಿನಲ್ಲಿ ವಾಸವಾಗಿದ್ದನು. ಅವನ ತಂದೆ ಸತ್ತಮೇಲೆ, ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು. 5ಈ ದೇಶದಲ್ಲಿ ಅವನಿಗೆ ಕಾಲಿಡುವಷ್ಷ್ಟು ಭೂಮಿಯನ್ನು ಸ್ವತ್ತಾಗಿ ಕೊಡದೆ ಅವನಿಗೆ ಮಕ್ಕಳೇ ಇಲ್ಲದಿರುವಾಗ ನೀನಿರುವ ದೇಶವನ್ನು ನಿನಗೂ, ನಿನ್ನ ನಂತರ ಬರುವ ನಿನ್ನ ಸಂತತಿಗೂ ಸ್ವತ್ತಾಗಿ ಕೊಡುವೆನೆಂದು ಅವನಿಗೆ ವಾಗ್ದಾನಮಾಡಿದನು. 47ಆದರೆ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. 48ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ನಿವಾಸಗಳಲ್ಲಿ ವಾಸಮಾಡುವವನಲ್ಲ. 49“‘ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಗಳಿಗೆ ಪೀಠ; ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು? 50ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬುದಾಗಿ ಕರ್ತನು ಹೇಳುತ್ತಾನೆ’ ಎಂದು ಪ್ರವಾದಿಯು ನುಡಿದಿದ್ದಾನೆ. 51“ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪೂರ್ವಿಕರು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ಎದುರಾಗಿ ನಡೆಯುವವರಾಗಿದ್ದೀರಿ. 52ಪ್ರವಾದಿಗಳಲ್ಲಿ ನಿಮ್ಮ ಪೂರ್ವಿಕರು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನಾದ ಕರ್ತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡಿದುಕೊಟ್ಟು ಕೊಲ್ಲಿಸಿದ್ದೀರಿ. 53ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ” ಎಂದು ಹೇಳಿದನು. 54ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 55ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ, ದೇವರ ಮಹಿಮೆಯನ್ನೂ, ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು; 56“ಅಗೋ, ಆಕಾಶವು ತೆರೆದಿರುವುದನ್ನೂ, ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ” ಎಂದು ಹೇಳಿದನು. 57ಆದರೆ ಅವರು ಮಹಾಶಬ್ದದಿಂದ ಕೂಗಿ, ಕಿವಿಗಳನ್ನು ಮುಚ್ಚಿಕೊಂಡು, ಒಟ್ಟಾಗಿ ಅವನ ಮೇಲೆ ಬಿದ್ದು, 58ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವುದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 59ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ, 60ಮೊಣಕಾಲೂರಿ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿ ನಿದ್ರೆಹೋದನು.

ಸುವಾರ್ತೆ (ಕ್ರಿಸ್ತ ಜನನದ ನಂತರದ ಶನಿವಾರ)

ಮತ್ತಾ 12:15–21

15ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು. 16ಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತನ್ನ ಬಗ್ಗೆ ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. 17ಹೀಗೆ ಯೆಶಾಯನೆಂಬ ಪ್ರವಾದಿಯ ಮೂಲಕ ಹೇಳಿಸಿರುವ ಮಾತು ನೆರವೇರಿತು; ಅದೇನೆಂದರೆ, 18“ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು. ಈತನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು. ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು. 19ಈತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ. ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವುದಿಲ್ಲ. 20ನ್ಯಾಯಕ್ಕೆ ಜಯ ದೊರೆಯುವವರೆಗೂ ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ಇರುವನು. 21ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.”

ಸುವಾರ್ತೆ

ಲೂಕ 16:10–15

10ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು. 11ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು? 12ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು? 13ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು. 14ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು. 15ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.

ಸುವಾರ್ತೆ (ಸಂತ ಸ್ತೆಫನ)

ಮತ್ತಾ 21:33–42

33“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು. 34ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು, 35ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು. 36ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು. 37ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. 38ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 39ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. 40ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು. 41ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು. 42ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 27 ಡಿಸೆಂಬರ್ ಎಂದರೆ ನಾಗರಿಕ ಪಂಚಾಂಗದ 9 ಜನವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು