Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 10 ಜನವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 10 ಜನವರಿ 2027

ಭಾನುವಾರ · ಕ್ರಿಸ್ಮಸ್ ಕಾಲ

ಹಬ್ಬಗಳು ಮತ್ತು ಸಂತರು

ಕರ್ತನ ದೀಕ್ಷಾಸ್ನಾನ

ಹಬ್ಬ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 55:1–11

1“ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ. 2ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. 3ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು. 4ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು. 5ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು. 6ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. 7ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು. 8ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. 10ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, 11ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.

ಪ್ರತಿವಚನ ಕೀರ್ತನೆ

ಯೆಶಾ 12:2–6

2ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು; ಯೆಹೋವನೇ ನನ್ನ ಬಲವೂ, ಕೀರ್ತನೆಯೂ ಆತನೇ, ನನಗೆ ರಕ್ಷಣೆಯೂ ಆಗಿದ್ದಾನೆ.” 3ಮತ್ತು ರಕ್ಷಣೆಯೆಂಬ ಬಾವಿಗಳಿಂದ ಉಲ್ಲಾಸದೊಡನೆ ನೀವು ನೀರನ್ನು ಸೇದುವಿರಿ. 4ಆ ದಿನದಲ್ಲಿ ನೀವು ಹೇಳುವುದೇನೆಂದರೆ, “ಯೆಹೋವನಿಗೆ ಕೃತಜ್ಞತಾ ಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಿಪಡಿಸಿರಿ, ಆತನ ನಾಮವು ಉನ್ನತೋನ್ನತ ಎಂದು ಜ್ಞಾಪಕಪಡಿಸಿರಿ. 5ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ. 6ಚೀಯೋನಿನ ನಿವಾಸಿಗಳೇ, ಉತ್ಸಾಹ ಧ್ವನಿಮಾಡಿರಿ; ಜಯಘೋಷಮಾಡಿರಿ. ಇಸ್ರಾಯೇಲರ ಪರಿಶುದ್ಧನು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ” ಎಂಬುದೇ.

ಎರಡನೆಯ ವಾಚನ

1 ಯೋಹಾ 5:1–9

1ಯೇಸುವೇ ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನೂ ದೇವರಿಂದ ಹುಟ್ಟಿದವನಾಗಿದ್ದಾನೆ. ಯಾವನು ತನ್ನನ್ನು ಹುಟ್ಟಿಸಿದ ತಂದೆಯನ್ನು ಪ್ರೀತಿಸುತ್ತಾನೋ, ಅವನು ತಂದೆಯಿಂದ ಹುಟ್ಟಿದವರೆಲ್ಲರನ್ನೂ ಪ್ರೀತಿಸುತ್ತಾನೆ. 2ನಾವು ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ. 3ದೇವರ ಮೇಲಿನ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ. ಆತನ ಆಜ್ಞೆಗಳು ಕಷ್ಟಕರವಾದವುಗಳಲ್ಲ. 4ಏಕೆಂದರೆ ದೇವರಿಂದ ಹುಟ್ಟಿದವನು ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದ್ದು ನಮ್ಮ ನಂಬಿಕೆಯೇ. 5ಯೇಸುಕ್ರಿಸ್ತನು ದೇವರ ಮಗನೆಂದು ಒಪ್ಪಿಕೊಂಡು ನಂಬಿದವರಲ್ಲದೆ ಮತ್ತಾರು ಲೋಕವನ್ನು ಜಯಿಸಿದವರಾಗಿದ್ದಾರೆ? 6ಈತನು ಅಂದರೆ ಯೇಸು ಕ್ರಿಸ್ತನು ನೀರಿನಿಂದಲೂ, ರಕ್ತದಿಂದಲೂ ಬಂದಾತನು. ನೀರಿನಿಂದ ಮಾತ್ರವಲ್ಲದೆ ನೀರಿನಿಂದಲೂ, ರಕ್ತದಿಂದಲೂ ಸಾಕ್ಷಿ ಹೊಂದಿದವನಾಗಿದ್ದಾನೆ. ಆತ್ಮವು ಸಾಕ್ಷಿಯನ್ನು ಕೊಡುತ್ತದೆ. ಏಕೆಂದರೆ ಆತ್ಮನು ಸತ್ಯಸ್ವರೂಪನೇ. 7ಇದಲ್ಲದೆ ಸಾಕ್ಷಿ ಕೊಡುವವರು ಮೂವರಿದ್ದಾರೆ. 8ಆತ್ಮ, ನೀರು, ರಕ್ತ ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತವೆ. 9ನಾವು ಮನುಷ್ಯರ ಸಾಕ್ಷಿಯನ್ನು ಒಪ್ಪಿಕೊಳ್ಳುತ್ತೇವಲ್ಲಾ, ಹಾಗೆ ದೇವರ ಸಾಕ್ಷಿಯು ಅದಕ್ಕಿಂತಲೂ ಶ್ರೇಷ್ಠವಾಗಿದೆ. ಏಕೆಂದರೆ ದೇವರು ಕೊಟ್ಟ ಸಾಕ್ಷಿಯು ತನ್ನ ಮಗನ ಕುರಿತದ್ದಾಗಿದೆ.

ಸುವಾರ್ತೆ

ಮಾರ್ಕ 1:7–11

7ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. 8ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು. 9ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು. 10ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು. 11ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು