ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 8 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 8 ಜನವರಿ 2027
ಶುಕ್ರವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಕರ್ತನ ಪ್ರತ್ಯಕ್ಷತೆಯ ಹಬ್ಬದ ನಂತರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ಬಿಳಿ
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
7ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. 8ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪನಾಗಿದ್ದಾನೆ. 9ನಾವು ಆತನ ಮೂಲಕ ಜೀವಿಸುವುದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. 10ನಾವು ದೇವರನ್ನು ಪ್ರೀತಿಸಿಲ್ಲ, ಆದರೂ ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟಿದ್ದರಲ್ಲಿಯೇ ಆತನ ನಿಜವಾದ ಪ್ರೀತಿಯು ತೋರಿಬರುತ್ತದೆ.
ಪ್ರತಿವಚನ ಕೀರ್ತನೆ
1ಸೊಲೊಮೋನನ ಕೀರ್ತನೆ. ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು; ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು. 2ಅವನು ನಿನ್ನ ಜನರಿಗೆ ನೀತಿಯಿಂದಲೂ, ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ. 3ಗುಡ್ಡ ದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ, ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ. 4ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ. 7ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. 8ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.
ಸುವಾರ್ತೆ
34ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದನು. 35ಅಷ್ಟರಲ್ಲಿ ಸಂಜೆ ಆಗಿದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು, “ಇದು ನಿರ್ಜನ ಸ್ಥಳ, ಈಗ ಹೊತ್ತು ಬಹಳವಾಯಿತು; 36ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ” ಎಂದು ಹೇಳಿದರು. 37ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು 38ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಅಂದನು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ” ಅಂದರು. 39ಆಗ ಆತನು ಅವರಿಗೆ, ಎಲ್ಲರೂ ಹಸಿರುಹುಲ್ಲಿನ ಮೇಲೆ ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ, 40ಜನರು ಪಂಕ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು. 41ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು. 42ಅವರೆಲ್ಲರೂ ತೃಪ್ತರಾಗುವವರೆಗೂ ಊಟಮಾಡಿದರು. 43ರೊಟ್ಟಿಯ ತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿಗಳು ತುಂಬಿದವು. 44ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು