Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 6 ಜನವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 6 ಜನವರಿ 2027

ಬುಧವಾರ · ಕ್ರಿಸ್ಮಸ್ ಕಾಲ

ಹಬ್ಬಗಳು ಮತ್ತು ಸಂತರು

ಕರ್ತನ ಪ್ರತ್ಯಕ್ಷತೆ

ಮಹೋತ್ಸವ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 60:1–6

1ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ. 2ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು. 3ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು. 4ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರಿಬರುತ್ತಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ. 5ನೀನು ಅವರನ್ನು ನೋಡಿ ಸಂತೋಷ ಸಂಭ್ರಮ ಪಡುವೆ, ನಿನ್ನ ಹೃದಯವು ಹರ್ಷಿಸಿ ಉಲ್ಲಾಸಿಸುವುದು; ಏಕೆಂದರೆ ಸಮುದ್ರ ವ್ಯಾಪಾರದ ಸಮೃದ್ಧಿಯು ನಿನಗೆ ಅತಿಯಾದ ಲಾಭತರುವುದು. ಕಡೆಗೆ ತಿರುಗುವುದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವುದು. 6ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.

ಪ್ರತಿವಚನ ಕೀರ್ತನೆ

ಕೀರ್ತ 72:1–2, 7–8, 10–13

1ಸೊಲೊಮೋನನ ಕೀರ್ತನೆ. ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು; ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು. 2ಅವನು ನಿನ್ನ ಜನರಿಗೆ ನೀತಿಯಿಂದಲೂ, ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ. 7ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ. 8ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ. 10ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ. 11ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ; ಸರ್ವಜನಾಂಗಗಳು ಆತನನ್ನು ಸೇವಿಸಲಿ. 12ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ, ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. 13ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.

ಎರಡನೆಯ ವಾಚನ

ಎಫೆ 3:2–3, 5–6

2ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ, 3ಆತನು ಮರ್ಮವನ್ನು ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ. 5ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. 6ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ದೇವಜನರೊಂದಿಗೆ ಸಹಬಾಧ್ಯರೂ ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.

ಸುವಾರ್ತೆ

ಮತ್ತಾ 2:1–12

1ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು, 2“ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು. 3ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು. 4ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು. 5ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ, 6“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು. 7ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು, 8“ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು. 9ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು. 10ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು. 11ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು. 12ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು