ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 7 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 7 ಜನವರಿ 2027
ಗುರುವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಕರ್ತನ ಪ್ರತ್ಯಕ್ಷತೆಯ ಹಬ್ಬದ ನಂತರದ ಗುರುವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಬಿಳಿ
ಪೆನ್ಯಾಫೋರ್ಟ್ನ ಸಂತ ರೇಮಂಡ್, ಧರ್ಮಗುರು · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
22ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು. 23ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ. 24ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ. 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು. 2ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ. 3ಯೇಸುಕ್ರಿಸ್ತನನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುತ್ತದೆಂಬುದನ್ನು ನೀವು ಕೇಳಿದ್ದೀರಲ್ಲಾ. ಅದು ಈಗಾಗಲೇ ಲೋಕದಲ್ಲಿ ಇದೆ. 4ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ. 5ಅವರು ಲೋಕಸಂಬಂಧಿಗಳಾಗಿದ್ದಾರೆ. ಈ ಕಾರಣದಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ. 6ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.
ಪ್ರತಿವಚನ ಕೀರ್ತನೆ
7ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ; ಆತನು ನನಗೆ, “ನನಗೆ ನೀನು ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ. 8ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವತ್ತಾಗಿ ಕೊಡುವೆನು. 10ಆದುದರಿಂದ ಅರಸುಗಳಿರಾ, ವಿವೇಕಿಗಳಾಗಿರಿ; ದೇಶಾಧಿಪತಿಗಳಿರಾ, ಬುದ್ಧಿವಾದಕ್ಕೆ ಕಿವಿಗೊಡಿರಿ. 11ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ; ನಡುಗುತ್ತಾ ಉಲ್ಲಾಸಪಡಿರಿ.
ಸುವಾರ್ತೆ
12ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು. 13ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು. 14ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ, 15“ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, 16ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು. 17ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು. 23ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. 24ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು. 25ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.
ಇಂದಿನ ಸಂತರು
- ಪೆನ್ಯಾಫೋರ್ಟ್ನ ಸಂತ ರೇಮಂಡ್, ಧರ್ಮಗುರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು