ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 5 ಜನವರಿ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 5 ಜನವರಿ 2027
ಮಂಗಳವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಜನವರಿ 5
ವಾರದ ದಿನ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
11ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ. 12ಕೆಡುಕುನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾಕೆ ತಮ್ಮನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟದ್ದು ಮತ್ತು ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ. 13ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ. 14ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. 15ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. 16ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. 17ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ? 18ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು. 19ನಾವು ಸತ್ಯಕ್ಕೆ ಸೇರಿದವರೆಂಬುದು ಇದರಿಂದಲೇ ನಮಗೆ ತಿಳಿಯುತ್ತದೆ, ನಮ್ಮ ಹೃದಯವು ದೇವರ ಸಮಕ್ಷಮದಲ್ಲಿ ದೋಷರಹಿತವಾಗಿರುತ್ತದೆ. 20ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು. 21ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ.
ಪ್ರತಿವಚನ ಕೀರ್ತನೆ
1ಕೃತಜ್ಞತಾಯಜ್ಞ ಕೀರ್ತನೆ. ಸಮಸ್ತಭೂನಿವಾಸಿಗಳೇ, ಯೆಹೋವನಿಗೆ ಉತ್ಸಾಹಧ್ವನಿಮಾಡಿರಿ. 2ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಕೀರ್ತನೆ ಹಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ. 3ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು, ಆತನ ಪ್ರಜೆಯೂ, ಆತನು ಪಾಲಿಸುವ ಹಿಂಡೂ ಆಗಿದ್ದೇವೆ. 4ಕೃತಜ್ಞತಾ ಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ, ಸ್ತುತಿಸ್ತೋತ್ರದೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರಗಳನ್ನು ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ. 5ಯೆಹೋವನು ಒಳ್ಳೆಯವನು; ಆತನ ಕೃಪೆಯು ಯುಗಯುಗಕ್ಕೂ, ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.
ಸುವಾರ್ತೆ
43ಮರುದಿನ ಯೇಸು ಗಲಿಲಾಯಕ್ಕೆ ಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದನು. 44ಈ ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರರ ಪಟ್ಟಣವಾದ ಬೆತ್ಸಾಯಿದದವನಾಗಿದ್ದನು. 45ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ “ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ” ಎಂದು ಹೇಳಿದನು. 46ನತಾನಯೇಲನು “ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ಕೇಳಲು, ಫಿಲಿಪ್ಪನು “ಬಂದು ನೋಡು,” ಅಂದನು. 47ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನನ್ನು ಕುರಿತು “ಇಗೋ, ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು. 48ಅದಕ್ಕೆ ನತಾನಯೇಲನು “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮೊದಲೇ ನೀನು ಆ ಅಂಜೂರದ ಮರದ ಕೆಳಗಿರುವುದನ್ನು ನಾನು ನೋಡಿದೆನು” ಎಂದು ಹೇಳಿದನು. 49ಅದಕ್ಕೆ ನತಾನಯೇಲನು, “ಗುರುವೇ, ನೀನು ದೇವಕುಮಾರನು! ನೀನೇ ಇಸ್ರಾಯೇಲಿನ ಅರಸನು” ಎಂದನು. 50ಅದಕ್ಕೆ ಯೇಸು “ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರಕ್ಕೆ ನಂಬುತ್ತೀಯೋ? ನೀನು ಇವುಗಳಿಗಿಂತಲೂ ಹೆಚ್ಚಿನ ಮಹತ್ಕಾರ್ಯಗಳನ್ನು ನೋಡುವೆ,” ಎಂದನು. 51ಯೇಸು “ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರು ಏರುತ್ತಾ ಇಳಿಯುತ್ತಾ ಇರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು