ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 29 ನವೆಂಬರ್
ಆರ್ಥೊಡಾಕ್ಸ್ ಪಂಚಾಂಗ · ನವೆಂಬರ್ 16 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 29 ನವೆಂಬರ್ 2026
ಭಾನುವಾರ · ಸ್ವರ 1
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 26ನೇ ಭಾನುವಾರ
ಕ್ರಿಸ್ತ ಜನನದ ಉಪವಾಸ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
1ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ, 2ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ. 3ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ, 4ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ. 5ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ. 6ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ. 7ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ. 8ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ. 10ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. 11ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು. 12ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ. 13ಆದ್ದರಿಂದ ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ. 14ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ, 15ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ. 16ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ. 17ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ. 18ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. 19ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ. 20ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು. 21ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ. 22ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ. 23ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು. 24ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು. 25ಆದರೆ ಕರ್ತನ ಮಾತೋ ಸದಾಕಾಲವೂ ಇರುವುದು.” ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ. 2:1ಆದಕಾರಣ ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ. 2ಹೊಸದಾಗಿ ಹುಟ್ಟಿದ ಶಿಶುಗಳಂತೆ ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ. 3ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ. 4ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ. 5ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ. 6“ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ. ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
ಸಂಧ್ಯಾ ಪ್ರಾರ್ಥನೆ: ವಾಚನ
21ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 22ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 23ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 24ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 25ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ. 3:1ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು. 3ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. 4ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. 5ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. 6ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ. 7ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ. 8ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ. 9ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.
ಸಂಧ್ಯಾ ಪ್ರಾರ್ಥನೆ: ವಾಚನ
1ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ. 2ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು. 3ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು. 4ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ. 5ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು. 6ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು. 7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ. 8ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ. 9ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ. 10ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ. 11ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.
ಉದಯಕಾಲದ ನಾಲ್ಕನೆಯ ಸುವಾರ್ತೆ
1ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು. 2ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು, 3ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ. 4ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು. 5ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು? 6ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು. 8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು, 9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. 11ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು. 12ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
ಪತ್ರಿಕೆ (ಸಂತ ಮತ್ತಾಯ)
9ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು. 10ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು. 11ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ, 12ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. 13ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ. 14ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. 15ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ. 16ಆದ್ದರಿಂದ ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ಪತ್ರಿಕೆ
8ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ. 9ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. 10ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ. 11ನಿಷ್ಪ್ರಯೋಜಕವಾದ ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ. 12ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ. 13ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ ಬಹಿರಂಗಪಡಿಸುವಂಥದ್ದು ಬೆಳಕೇ. 14ಆದ್ದರಿಂದ, “ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಆಗ ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ. 15ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ. 16ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ. 17ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು, 19ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.
ಸುವಾರ್ತೆ (ಸಂತ ಮತ್ತಾಯ)
9ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು. 10ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು. 11ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, “ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು. 12ಯೇಸು ಅದನ್ನು ಕೇಳಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. 13ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ಸುವಾರ್ತೆ
25ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು, 26ಆತನು ಅವನಿಗೆ, “ಧರ್ಮಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಎಂದು ಕೇಳಿದನು. 27ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು. 28ಆತನು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟಿರುವಿ, ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ” ಎಂದು ಹೇಳಿದನು. 29ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವುದಕ್ಕೆ ಅಪೇಕ್ಷಿಸಿ, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಲು, 30ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ, “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನ ಬೆಟ್ಟದ ಪ್ರದೇಶದಿಂದ ಇಳಿದು ಯೆರಿಕೋ ಎಂಬ ಊರಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು, ಹೊಡೆದು, ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. 31ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು. 32ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು. 33ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನು ಬಿದಿದ್ದ ಸ್ಥಳಕ್ಕೆ ಬಂದಾಗ ಅವನನ್ನು ಕಂಡು ಕನಿಕರಿಸಿ, 34ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. 35ಮರುದಿನ ಅವನು ಎರಡು ದಿನಾರಿಗಳನ್ನು ತೆಗೆದು ಛತ್ರದವನಿಗೆ ಕೊಟ್ಟು, ‘ಇವನನ್ನು ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು’ ಅಂದನು. 36ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ, 37ಆ ಧರ್ಮೋಪದೇಶಕನು, “ಅವನಿಗೆ ದಯೆ ತೋರಿಸಿದವನೇ” ಅಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 16 ನವೆಂಬರ್ ಎಂದರೆ ನಾಗರಿಕ ಪಂಚಾಂಗದ 29 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು