Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 29 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ನವೆಂಬರ್ 2026

ಭಾನುವಾರ · ಆಗಮನ ಕಾಲದ ಮೊದಲನೆಯ ವಾರ

ಹಬ್ಬಗಳು ಮತ್ತು ಸಂತರು

ಆಗಮನ ಕಾಲದ ಮೊದಲನೆಯ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 63:16–17; 64:1, 3–8

16ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ. 17ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು. 64:1ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಗಲಿದರೆ ಎಷ್ಟೋ ಒಳ್ಳೆಯದು! 3ಹೌದು, ನೀನು ಮೊದಲಿನಂತೆ ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡೆಸಿ ಇಳಿದು ಬಂದು, ಪರ್ವತಗಳು ನಿನ್ನ ದರ್ಶನದಿಂದ ನಡುಗಿದರೆ ಎಷ್ಟೋ ಲೇಸು! 4ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ. 5ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದಿ; ನಮ್ಮ ಮೇಲಾದರೋ ರೋಷಗೊಂಡಿದ್ದಿ; ಆದರೂ ಪಾಪದಲ್ಲಿ ಮುಳುಗಿರುವ ನಮಗೆ ರಕ್ಷಣೆಯಾದೀತೇ? 6ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ. 7ಈಗ ನಿನ್ನ ಹೆಸರೆತ್ತಿ ಪ್ರಾರ್ಥಿಸಿ, ನಿನ್ನನ್ನು ಆಶ್ರಯಿಸಲು ತ್ರಾಣ ತಂದುಕೊಳ್ಳುವವನು ಎಲ್ಲಿಯೂ ಇಲ್ಲ; ನೀನು ನಮಗೆ ವಿಮುಖನಾಗಿ ನಮ್ಮನ್ನು ನಮ್ಮ ಅಪರಾಧಗಳಿಗೆ ವಶಮಾಡಿದ್ದಿಯಲ್ಲಾ. 8ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.

ಪ್ರತಿವಚನ ಕೀರ್ತನೆ

ಕೀರ್ತ 80:1–2, 14–15, 17–18

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಶೋಶನ್ನೀಮ್ ಎದೂತೆಂಬ ರಾಗ. ಆಸಾಫನ ಕೀರ್ತನೆ. ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು. 2ಎಫ್ರಾಯೀಮ್, ಬೆನ್ಯಾಮೀನ್ ಮತ್ತು ಮನಸ್ಸೆ ಕುಲಗಳ ಮುಂದೆ ಹೋಗುವವನಾಗಿ, ನಿನ್ನ ಶೌರ್ಯವನ್ನು ತೋರ್ಪಡಿಸು; ಬಂದು ನಮಗೆ ಜಯಪ್ರದನಾಗು. 14ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು. 15ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು. 17ನಿನ್ನ ಬಲಗೈ ಉದ್ಧರಿಸಿದ ಪುರುಷನೂ, ನೀನು ನಿನಗೋಸ್ಕರ ಸಾಕಿ ಬೆಳೆಸಿದ ನರಪುತ್ರನೂ ಆಗಿರುವವನನ್ನು, ನಿನ್ನ ಹಸ್ತದಿಂದ ಹಿಡಿದಿರು. 18ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು.

ಎರಡನೆಯ ವಾಚನ

1 ಕೊರಿ 1:3–9

3ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಉಂಟಾಗಲಿ. 4ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ. 5ಆತನು ಎಲ್ಲಾ ರೀತಿಯಲ್ಲಿಯೂ, ಎಲ್ಲಾ ನುಡಿಗಳಲ್ಲಿಯೂ, ಎಲ್ಲಾ ತಿಳಿವಳಿಕೆಯಲ್ಲಿಯೂ, ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 6ಕ್ರಿಸ್ತನ ಕುರಿತಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿರುವ ಹಾಗೆಯೇ ಆತನು ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 7ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು ನೀವು ಎದುರುನೋಡುತ್ತಾ ಇರುವುದರಿಂದ ಆತ್ಮೀಕ ಕೃಪಾವರದ ಕೊರತೆಯೂ ನಿಮಗೆ ಉಂಟಾಗುವುದಿಲ್ಲ, 8ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ನೀವು ನಿರಪರಾಧಿಗಳಾಗಿರುವಂತೆ ಆತನು ನಿಮ್ಮನ್ನು ಕಡೆಯವರೆಗೂ ದೃಢಪಡಿಸುವನು. 9ತನ್ನ ಮಗನೂ ಹಾಗೂ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ನಂಬಿಗಸ್ತನು.

ಸುವಾರ್ತೆ

ಮಾರ್ಕ 13:33–37

33ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. 34ಅದು ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ದೂರಪ್ರಯಾಣಕ್ಕೆ ಹೋಗುವಾಗ ತನ್ನ ಸೇವಕರಿಗೆ ಮನೇ ಅಧಿಕಾರವನ್ನು ಒಪ್ಪಿಸಿಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸಗಳನ್ನು ಕೊಟ್ಟು ಬಾಗಿಲು ಕಾಯುವವನಿಗೆ, ನೀನು ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ” ಎಂದು ನಾನು ನಿಮಗೆ ಹೇಳುತ್ತಿದ್ದೇನೆ. 35“ಮನೆ ಯಜಮಾನನು ಸಂಜೆಯಲ್ಲಿಯೋ, ಮಧ್ಯರಾತ್ರಿಯಲ್ಲಿಯೋ, ಕೋಳಿ ಕೂಗುವಾಗಲೋ ಬೆಳಕಾಗುವಾಗಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ! 36ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುತ್ತಿರುವುದನ್ನು ಕಂಡಾನು. 37ನಾನು ನಿಮಗೆ ಹೇಳುತ್ತಿರುವುದನ್ನು ಎಲ್ಲರಿಗೂ ಹೇಳುತ್ತಿದ್ದೇನೆ; ಎಚ್ಚರವಾಗಿರಿ!” ಎಂದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು