ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 18 ನವೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 18 ನವೆಂಬರ್ 2026
ಬುಧವಾರ · ಸಾಮಾನ್ಯ ಕಾಲದ 33ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 33ನೇ ವಾರದ ಬುಧವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಅಪೊಸ್ತಲರಾದ ಸಂತ ಪೇತ್ರ ಮತ್ತು ಪೌಲರ ಬಸಿಲಿಕಗಳ ಪ್ರತಿಷ್ಠಾಪನೆ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, “ಇಲ್ಲಿಗೆ ಏರಿ ಬಾ, ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು. 2ಕೂಡಲೆ ನಾನು ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. 3ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು. 4ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು. 6ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. 7ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. 8ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, “ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು, ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು. 9ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, 10ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಸ್ತೋತ್ರ! ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಶಕ್ತಿಪ್ರದರ್ಶಕವಾದ ಆಕಾಶಮಂಡಲದಲ್ಲಿ ಆತನನ್ನು ಸ್ತುತಿಸಿರಿ. 2ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ; ಆತನ ಮಹಾಪ್ರಭಾವಕ್ಕೆ ಸರಿಯಾಗಿ ಆತನನ್ನು ಸ್ತುತಿಸಿರಿ. 3ಕೊಂಬೂದುತ್ತಾ ಆತನನ್ನು ಸ್ತುತಿಸಿರಿ; ಸ್ವರಮಂಡಲ, ಕಿನ್ನರಿಗಳಿಂದ ಆತನನ್ನು ಸ್ತುತಿಸಿರಿ. 4ದಮ್ಮಡಿಯನ್ನು ಬಡಿಯುತ್ತಾ, ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ. 5ತಾಳದಿಂದ ಆತನನ್ನು ಸ್ತುತಿಸಿರಿ; ಝಲ್ಲರಿಯಿಂದ ಆತನನ್ನು ಸ್ತುತಿಸಿರಿ. 6ಶ್ವಾಸವಿರುವ ಎಲ್ಲವೂ ಯೆಹೋವನನ್ನು ಸ್ತುತಿಸಲಿ; ಯೆಹೋವನಿಗೆ ಸ್ತೋತ್ರ!
ಸುವಾರ್ತೆ
11ಜನರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದ್ದದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದರಿಂದಲೂ ಇನ್ನೂ ಒಂದು ಸಾಮ್ಯವನ್ನು ಅವರಿಗೆ ಹೇಳಿದನು. 12ಅದೇನೆಂದರೆ, “ಶ್ರೀಮಂತನಾದ ಒಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರಬೇಕೆಂದು ದೂರದೇಶಕ್ಕೆ ಹೊರಟನು. 13ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, ‘ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರಿ’ ಎಂದು ಹೇಳಿ ಹೊರಟು ಹೋದನು. 14ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು. 15ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬಂದು, ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ, ಅವರನ್ನು ತನ್ನ ಬಳಿಗೆ ಕರೆಯಿಸಿದನು. 16ಮೊದಲನೆಯವನು ಆತನ ಮುಂದೆ ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು’ ಅನ್ನಲು, 17ಅವನು ಅವನಿಗೆ, ‘ಭಲಾ! ನೀನು ಒಳ್ಳೆಯ ಆಳು, ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು. 18ಎರಡನೆಯವನು ಬಂದು, ‘ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು’ ಅನ್ನಲು, 19ಅವನು ಆ ಆಳಿಗೆ, ‘ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು’ ಎಂದು ಹೇಳಿದನು. 20ಬಳಿಕ ಮತ್ತೊಬ್ಬನು ಬಂದು, ‘ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. ನೀನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು’ ಅಂದನು. 22ಅದಕ್ಕೆ ಅವನು, ‘ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವುದನ್ನು ಎತ್ತಿಕೊಂಡು ಹೋಗುವವನು, ಬಿತ್ತದೆಯಿರುವುದನ್ನು ಕೊಯ್ಯುವ ಉಗ್ರವಾದ ಮನುಷ್ಯನು ಎಂದು ತಿಳಿದಿರುವೆಯಾ? 23ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗೆ ಯಾಕೆ ಕೊಡಲಿಲ್ಲ? ಆ ಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು’ ಎಂದು ಹೇಳಿ, 24ಹತ್ತಿರ ನಿಂತಿದ್ದವರಿಗೆ, ‘ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳುಳ್ಳವನಿಗೆ ಕೊಡಿರಿ’ ಎಂದು ಹೇಳಿದನು. 25ಅವರು, ‘ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ’ ಎಂದು ಅವನಿಗೆ ಹೇಳಿದರು. 26ಅದಕ್ಕವನು, ‘ಇದ್ದವರಿಗೆಲ್ಲಾ ಕೊಡಲ್ಪಡುವುದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು’ ಎಂದು ನಾನು ನಿಮಗೆ ಹೇಳುತ್ತೇನೆ 27ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ” ಅಂದನು. 28ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು