Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 19 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ನವೆಂಬರ್ 2026

ಗುರುವಾರ · ಸಾಮಾನ್ಯ ಕಾಲದ 33ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 33ನೇ ವಾರದ ಗುರುವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ಪ್ರಕ 5:1–10

1ನಾನು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. 2ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು. 3ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. 4ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. 5ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, ಯೂದ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು. 6ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ. 7ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು. 8ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು. 9ಅವರು ಹೊಸಹಾಡನ್ನು ಹಾಡುತ್ತಾ, “ನೀನು ಸುರುಳಿಯನ್ನು ಸ್ವೀಕರಿಸಲು ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. ನೀನು ವಧಿಸಲ್ಪಟ್ಟು, ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು ದೇವರಿಗಾಗಿ ಕೊಂಡುಕೊಂಡಿರುವೆ. 10ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, ಯಾಜಕರನ್ನಾಗಿಯೂ ಮಾಡಿರುವೆ. ಅವರು ಭೂಮಿಯನ್ನು ಆಳುವರು.”

ಪ್ರತಿವಚನ ಕೀರ್ತನೆ

ಕೀರ್ತ 149:1–6, 9

1ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ನೂತನ ಕೀರ್ತನೆಯನ್ನು ಹಾಡಿರಿ; ಭಕ್ತರ ಸಭೆಯಲ್ಲಿ ಆತನನ್ನು ಸ್ತುತಿಸಿರಿ. 2ಇಸ್ರಾಯೇಲರು ತಮ್ಮ ಸೃಷ್ಟಿಕರ್ತನಲ್ಲಿ ಹೆಮ್ಮೆಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ. 3ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; ದಮ್ಮಡಿ, ಕಿನ್ನರಿಗಳಿಂದ ಆತನನ್ನು ಭಜಿಸಲಿ. 4ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ. 5ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ. 6ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ, ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ. 9ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವುದು. ಯೆಹೋವನಿಗೆ ಸ್ತೋತ್ರ.

ಸುವಾರ್ತೆ

ಲೂಕ 19:41–44

41ತರುವಾಯ ಆತನು ಯೆರೂಸಲೇಮ್ ಪಟ್ಟಣದ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಕಣ್ಣೀರಿಡುತ್ತಾ, 42“ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ. 43ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ, ನಿನ್ನ ವೈರಿಗಳು ನಿನ್ನ ಸುತ್ತಲೂ ಒಡ್ದುಕಟ್ಟಿ, ಮುತ್ತಿಗೆ ಹಾಕಿ, ಎಲ್ಲಾ ಕಡೆಗಳಿಂದ ನಿನ್ನನ್ನು ಒಂದುಗೂಡಿಸಿ, ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿನಗಳು ನಿನ್ನ ಮೇಲೆ ಬರುವವು” ಅಂದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು