IRV · ಅಧ್ಯಾಯ 4 / 22
ಪ್ರಕಟಣೆ 4
1ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು, “ಇಲ್ಲಿಗೆ ಏರಿ ಬಾ, ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು” ಎಂದು ಹೇಳಿತು.
2ಕೂಡಲೆ ನಾನು ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು.
3ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು.
4ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.
5ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು.
6ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು.
8ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, “ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು, ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು.
9ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ,
10ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ (IRV, 2019) · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. (ಪಠ್ಯ ಬದಲಾಗಿಲ್ಲ; ಅಡಿಟಿಪ್ಪಣಿಗಳು ಮತ್ತು ಶೀರ್ಷಿಕೆಗಳನ್ನು ಬಿಡಲಾಗಿದೆ) · eBible.org