ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 17 ನವೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 17 ನವೆಂಬರ್ 2026
ಮಂಗಳವಾರ · ಸಾಮಾನ್ಯ ಕಾಲದ 33ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 33ನೇ ವಾರದ ಮಂಗಳವಾರ
ಸ್ಮರಣೆ · ಆರಾಧನಾ ಬಣ್ಣ: ಬಿಳಿ
ಹಂಗೇರಿಯ ಸಂತ ಎಲಿಜಬೆತ್, ಸನ್ಯಾಸಿನಿ · ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ, ದೇವರ ಏಳು ಆತ್ಮಗಳನ್ನು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವವನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ನಾನು ಬಲ್ಲೆನು. ಜೀವಿಸುವವನು ಎಂಬ ಹೆಸರು ನಿನಗಿದ್ದರೂ ನೀನು ಸತ್ತವನಾಗಿರುವೆ. 2“ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ. 3ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆ ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ. 4ಆದರೂ ತಮ್ಮ ಅಂಗಿಗಳನ್ನು ಮಲಿನ ಮಾಡಿಕೊಳ್ಳದಿರುವ ಸ್ವಲ್ಪ ಜನರು ಸಾರ್ದಿಸಿನಲ್ಲಿ ನಿನಗಿದ್ದಾರೆ. ಅವರು ಯೋಗ್ಯರಾಗಿರುವುದರಿಂದ ಶುಭ್ರವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು. 5ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು. ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ, ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು. 6ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ. 14“ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ, ದೇವರ ಸೃಷ್ಟಿಗೆ ಮೂಲನೂ ಆಗಿರುವ ‘ಆಮೆನ್’ ಎಂಬಾತನು ಹೇಳುವುದೇನಂದರೆ, 15ನಿನ್ನ ಕೃತ್ಯಗಳನ್ನು ಬಲ್ಲೆನು. ನೀನು ತಣ್ಣಗಿರುವವನೂ ಅಲ್ಲ ಬೆಚ್ಚಗಿರುವವನೂ ಅಲ್ಲ ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದಿದ್ದರೆ ಚೆನ್ನಾಗಿತ್ತು. 16ನೀನು ಬೆಚ್ಚಗೂ ಅಲ್ಲದೆ ತಣ್ಣಗೂ ಅಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಉಗಿದು ಬಿಡುವೆನು. 17ನೀನು ನಿನ್ನ ವಿಷಯದಲ್ಲಿ ನಾನು ಐಶ್ವರ್ಯವಂತನು, ಸಂಪನ್ನನು, ಯಾವುದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ. ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾಗಿರುವವನೂ ಆಗಿರುವುದನ್ನು ತಿಳಿಯದೇ ಇರುವೆ. 18ನೀನು ಐಶ್ವರ್ಯವಂತನಾಗಲು ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನೂ, ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ ಬಿಳೀವಸ್ತ್ರಗಳನ್ನೂ, ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ. 19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಜಾಗರೂಕನಾಗಿರು. ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. 20ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಧ್ವನಿಯನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು. ಅವನು ನನ್ನ ಸಂಗಡ ಊಟ ಮಾಡುವನು. 21ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆಯೇ ಜಯಶಾಲಿಯಾದವನಿಗೆ ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ. 22ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”
ಪ್ರತಿವಚನ ಕೀರ್ತನೆ
2ಅವನು ಸಜ್ಜನನೂ, ನೀತಿವಂತನೂ, ಮನಃಪೂರ್ವಕವಾಗಿ ಸತ್ಯದ ಮಾತುಗಳನ್ನಾಡುವವನೂ ಆಗಿರಬೇಕು. 3ಅವನು ಚಾಡಿಯನ್ನು ಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು. 4ಅವನು ಭ್ರಷ್ಟರನ್ನು ಬಿಟ್ಟುಬಿಟ್ಟವನೂ, ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ, ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು. 5ಅವನು ಸಾಲಕ್ಕೆ ಬಡ್ಡಿ ಕೇಳದವನೂ, ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು. ಇಂಥವನು ಎಂದಿಗೂ ಕದಲುವುದಿಲ್ಲ.
ಸುವಾರ್ತೆ
1ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ, 2ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು. 3ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು. 4ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು. 5ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ, “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಉಳಿದುಕೊಳ್ಳಬೇಕು” ಎಂದು ಅವನಿಗೆ ಹೇಳಲು, 6ಅವನು ತಕ್ಷಣ ಇಳಿದು ಬಂದು ಆತನನ್ನು ಸಂತೋಷದಿಂದ ಬರಮಾಡಿಕೊಂಡನು. 7ಇದನ್ನು ನೋಡಿದವರೆಲ್ಲರು, “ಈತನು ಪಾಪಿಯಾಗಿರುವವನ ಬಳಿಯಲ್ಲಿ ಉಳಿದುಕೊಳ್ಳುವುದಕ್ಕೆ ಹೋಗಿದ್ದಾನೆ” ಎಂದು ಗೊಣಗುಟ್ಟಿದರು. 8ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು. 9ಇದನ್ನು ಕೇಳಿ ಯೇಸು, “ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ. 10ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು” ಎಂದು ಹೇಳಿದನು.
ಇಂದಿನ ಸಂತರು
- ಹಂಗೇರಿಯ ಸಂತ ಎಲಿಜಬೆತ್, ಸನ್ಯಾಸಿನಿ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು