ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಯೆಹೂದದ ಅರಸರು
ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಯೆಹೂದದ ಅರಸರು
ಯೆಹೋವಾಷನ ಅಂತ್ಯ
2 ಅರಸು 12:17–21 · 2 ಪೂರ್ವ 24:23–27
2 ಅರಸು 12:17–2117ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆ ಹಾಕಿ, ಅದನ್ನು ಸ್ವಾಧೀನಪಡಿಸಿಕೊಂಡನು. ಅಲ್ಲಿಂದ ಅವನು ಯೆರೂಸಲೇಮಿಗೆ ವಿರೋಧವಾಗಿ ಹೊರಟನು.
18ಯೆಹೂದದ ಅರಸನಾದ ಯೆಹೋವಾಷನು ಇದನ್ನು ಕೇಳಿ ತಾನೂ ತನ್ನ ಪೂರ್ವಿಕರಾದ ಯೆಹೋಷಾಫಾಟನೂ, ಯೆಹೋರಾಮನೂ, ಅಹಜ್ಯನೂ, ಯೆಹೂದ ರಾಜರೂ ದೇವಸ್ಥಾನಕ್ಕೆ ಕಾಣಿಕೆಯಾಗಿ ಕೊಟ್ಟ ಒಡವೆಗಳು, ಯೆಹೋವನ ಆಲಯದ ಪ್ರತಿಷ್ಠೆಗಾಗಿ ಅರಮನೆಯ ಭಂಡಾರಗಳಲ್ಲಿದ್ದ ಬಂಗಾರ ಇವುಗಳನ್ನು ತೆಗೆದುಕೊಂಡು ಅರಾಮ್ಯರ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟು ಹೋದನು.
19ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
20ಯೆಹೋವಾಷನ ಉದ್ಯೋಗಸ್ಥರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ “ಸಿಲ್ಲಾ” ಊರಿಗೆ ಇಳಿದು ಹೋಗುವ ಮಾರ್ಗವಾದ “ಮಿಲ್ಲೋ” ಗೃಹದಲ್ಲಿ ಯೆಹೋವಾಷನನ್ನು ಕೊಂದರು.
21ಅವರಲ್ಲಿ ಶಿಮೆಯಾತನ ಮಗನಾದ ಯೋಜಾಕಾರ್, ಶೋಮೆರನ ಮಗನಾದ ಯೆಹೋಜಾಬಾದ್ ಎಂಬುವವರು ಅವನ ಮೇಲೆ ಬಿದ್ದು ಅವನನ್ನು ಕೊಂದರು. ಅವನ ಜನರು ಅವನ ಶವವನ್ನು ದಾವೀದ ನಗರದೊಳಗೆ ಅವನ ಪೂರ್ವಿಕರ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
2 ಪೂರ್ವ 24:23–2723ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಯೆಹೂದ ದೇಶದೊಳಗೆ ನುಗ್ಗಿ, ಯೆರೂಸಲೇಮಿಗೆ ಬಂದು ಇಸ್ರಾಯೇಲರ ಎಲ್ಲಾ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿಬಿಟ್ಟರು.
24ಅರಾಮ್ಯ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿದ್ದರಿಂದ ಮಹಾಸೈನ್ಯವಾಗಿದ್ದ ಅವರನ್ನು ಯೆಹೋವನು ಅರಾಮ್ಯರ ಕೈಯಲ್ಲಿ ಸೋಲುವಂತೆ ಮಾಡಿ, ಯೆಹೋವಾಷನನ್ನು ಅವರ ಮುಖಾಂತರ ಶಿಕ್ಷಿಸಿದನು.
25ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಅರಾಮ್ಯರು ಬಿಟ್ಟು ಹೋದ ಕೂಡಲೆ, ಅವನ ಸೇವಕರು ಅವನು ಯಾಜಕನಾದ ಯೆಹೋಯಾದನ ಮಗನನ್ನು ಕೊಲ್ಲಿಸಿದ ನಿಮಿತ್ತ, ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ, ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು. ಆದರೆ ರಾಜಸ್ಮಶಾನದಲ್ಲಿ ಅವನನ್ನು ಸಮಾಧಿ ಮಾಡಲಿಲ್ಲ.
26ಅಮ್ಮೋನಿಯರ ದೇಶದ ಶಿಮ್ಗಾತೆಂಬಾಕೆಯ ಮಗನಾದ ಜಾಬಾದ್, ಮೋವಾಬ್ ದೇಶದ ಶಿಮ್ರಾತೆಂಬಾಕೆಯ ಮಗನಾದ ಯೆಹೋಜಾಬಾದ್ ಎಂಬುವರೇ ಅವನ ವಿರುದ್ಧವಾಗಿ ಒಳಸಂಚು ಮಾಡಿದವರು.
27ಅವನ ಮಕ್ಕಳು ಅವನಿಗೆ ವಿರುದ್ಧವಾಗಿ ಹೇಳಲಾದ ಅನೇಕ ದೈವೋಕ್ತಿಗಳೂ, ಹಾಗು ದೇವಾಲಯದ ಜೀರ್ಣೋದ್ಧಾರ ವೃತ್ತಾಂತವು, ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ದಾಖಲಿಸಲಾಗಿದೆ. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.