Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ › ಯೆಹೂದದ ಅರಸರು

ಪಕ್ಕಪಕ್ಕದಲ್ಲಿ ಅರಸುಗಳು ಮತ್ತು ಪೂರ್ವಕಾಲವೃತ್ತಾಂತ · ಯೆಹೂದದ ಅರಸರು

ಯೆಹೋಷಾಫಾಟನ ಆಳ್ವಿಕೆ

1 ಅರಸು 22:41–50 · 2 ಪೂರ್ವ 20:31–37; 21:1

1 ಅರಸುಗಳು

1 ಅರಸು 22:41–50

41ಇಸ್ರಾಯೇಲ್ಯರ ಅರಸನಾದ ಅಹಾಬನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಆಸನ ಮಗನಾದ ಯೆಹೋಷಾಫಾಟನು ಯೆಹೂದ್ಯರ ಅರಸನಾದನು.

42ಅವನು ಅರಸನಾದಾಗ ಮೂವತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ

43ಅವನು ತಪ್ಪದೆ ತನ್ನ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದರೂ, ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ಆ ಸ್ಥಳಗಳಲ್ಲಿ ಯಜ್ಞಮಾಡುತ್ತಾ ಧೂಪಹಾಕುತ್ತಾ ಇದ್ದರು.

44ಅವನು ಇಸ್ರಾಯೇಲ್ಯರ ಅರಸರೊಡನೆ ಸಮಾಧಾನದಿಂದಿದ್ದನು.

45ಅವನ ಉಳಿದ ಚರಿತ್ರೆಯೂ ಅವನು ಯುದ್ಧಗಳಲ್ಲಿ ನಡಿಸಿದ ಶೂರಕೃತ್ಯಗಳ ವಿವರವೂ ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.

46ಅವನು ತನ್ನ ತಂದೆಯಾದ ಅಸನ ಕಾಲದಲ್ಲಿ ತಪ್ಪಿಸಕೊಂಡ ದೇವದಾಸದಾಸಿಯರನ್ನು ದೇಶದಿಂದ ತೆಗೆದುಹಾಕಿದನು.

47ಆ ಕಾಲದಲ್ಲಿ ಎದೋಮ್ ದೇಶದಲ್ಲಿ ಅರಸನಿರಲಿಲ್ಲ. ಅವನ ಪ್ರತಿನಿಧಿಯೇ ಅದನ್ನು ಆಳುತ್ತಿದ್ದನು.

48ಇದಲ್ಲದೆ ಯೆಹೋಷಾಫಾಟನು ಓಫೀರಿನಿಂದ ಬಂಗಾರ ತರುವುದಕ್ಕಾಗಿ ತಾರ್ಷಿಷ್ ಹಡಗುಗಳನ್ನು ಮಾಡಿಸಿದನು.

49ಆಗ ಅಹಾಬನ ಮಗನಾದ ಅಹಜ್ಯನು ಅವನನ್ನು, “ನಿನ್ನ ಜನರ ಜೊತೆಯಲ್ಲಿ ನನ್ನ ಜನರೂ ಸಮುದ್ರ ಪ್ರಯಾಣ ಮಾಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬೇಡಿಕೊಂಡನು. ಅವನು ಅದಕ್ಕೆ ಒಪ್ಪಲಿಲ್ಲ. ಆದರೆ ಆ ಹಡಗುಗಳು ಎಚ್ಯೋನ್ಗೆಬೆರಿನಲ್ಲಿ ಒಡೆದುಹೋದುದರಿಂದ ಓಫೀರನ್ನು ಮುಟ್ಟಲಿಲ್ಲ.

50ಯೆಹೋಷಾಫಾಟನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೆಹೋರಾಮನು ಅರಸನಾದನು.

2 ಪೂರ್ವಕಾಲವೃತ್ತಾಂತ

2 ಪೂರ್ವ 20:31–37; 21:1

20:31ಯೆಹೂದ್ಯರ ಅರಸನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಡಳಿತ ನಡೆಸಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.

20:32ಇವನು ತನ್ನ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಅದನ್ನು ಮೀರದೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.

20:33ಅದರೂ ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ತಮ್ಮ ಪೂರ್ವಿಕರ ದೇವರ ಮೇಲೆ ಮನಸ್ಸಿಟ್ಟಿರಲಿಲ್ಲ, ದೇವರ ಕಡೆಗೆ ತಿರುಗಿಕೊಳ್ಳಲೂ ಇಲ್ಲ.

20:34ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆಯು ಇಸ್ರಾಯೇಲ್ ರಾಜರ ಗ್ರಂಥದಲ್ಲಿ ಅಡಕವಾಗಿರುವ ಹನಾನೀಯ ಮಗನಾದ ಯೇಹುವಿನ ವೃತ್ತಾಂತದಲ್ಲಿ ಬರೆಯಲಾಗಿದೆ.

20:35ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನೂ, ಬಹು ದುರಾಚಾರಿಯೂ ಆದ ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡನು.

20:36ಅವರು ತಾರ್ಷೀಷಿಗೆ ಹೋಗುವುದಕ್ಕಾಗಿ ಹಡುಗುಗಳನ್ನು ಕಟ್ಟಬೇಕೆಂದು ಒಡಬಂಡಿಕೆ ಮಾಡಿಕೊಂಡು ಅವುಗಳನ್ನು ಎಚ್ಯೋನ್ ಗೆಬೆರಿನಲ್ಲಿ ಕಟ್ಟಿಸಿದರು.

20:37ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರುದ್ಧವಾಗಿ, “ನೀನು ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳು ಮಾಡುವನು” ಎಂದು ಪ್ರವಾದಿಸಿದನು. ಆ ಹಡುಗುಗಳು ಒಡೆದು ಹೋದುದರಿಂದ ತಾರ್ಷೀಷಿಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ.

21:1ಯೆಹೋಷಾಫಾಟನು ಪೂರ್ವಿಕರ ಬಳಿಗೆ ಸೇರಿದನು. ದಾವೀದನಗರದಲ್ಲಿ ಅವನನ್ನು ಪೂರ್ವಿಕರ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದ ಮೇಲೆ, ಅವನ ಮಗನಾದ ಯೆಹೋರಾಮನು ಅರಸನಾದನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು