1ದಾವೀದನ ಜೀವಮಾನದಲ್ಲೆಲ್ಲಾ ಅವನ ಮಿತ್ರನಾಗಿದ್ದ ತೂರಿನ ಅರಸನಾದ ಹೀರಾಮನು ಸೊಲೊಮೋನನು ಅವನ ತಂದೆಯ ನಂತರ ಅಭಿಷೇಕಿಸಲ್ಪಟ್ಟನು ಎಂಬುದಾಗಿ ಕೇಳಿದಾಗ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು.
2ಅನಂತರ ಸೊಲೊಮೋನನು ದೂತರ ಮುಖಾಂತರವಾಗಿ ಹೀರಾಮನಿಗೆ,
3“ಯೆಹೋವನ ಅನುಗ್ರಹದಿಂದ ನಮ್ಮ ತಂದೆಯಾದ ದಾವೀದನಿಗೆ ಎಲ್ಲಾ ಶತ್ರುಗಳು ವಶವಾಗುವವರೆಗೆ ಅವನು ತನ್ನ ಸುತ್ತಲೂ ಯುದ್ಧಗಳನ್ನು ನಡೆಸಬೇಕಾಯಿತು. ಆದುದರಿಂದ ಅವನು ತನ್ನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದನೆಂದು ನೀನು ಬಲ್ಲೇ.
4ನನಗಾದರೋ ನನ್ನ ದೇವರಾದ ಯೆಹೋವನು ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ, ಆತನ ದಯೆಯಿಂದ ಆಪತ್ತು ನನ್ನಿಂದ ದೂರವಾಗಿದೆ.
5ಯೆಹೋವನು ನನ್ನ ತಂದೆಯಾದ ದಾವೀದನಿಗೆ, ‘ನಾನು ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗನು ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ’ ಎಂದು ಹೇಳಿದ್ದರಿಂದ ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಒಂದು ಅಲಯವನ್ನು ಕಟ್ಟಬೇಕೆಂದಿದ್ದೇನೆ,
6ಆದುದರಿಂದ ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು, ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಚೀದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವುದಿಲ್ಲವೆಂದು ನಿನಗೆ ಗೊತ್ತಿದೆಯಲ್ಲಾ” ಎಂದು ಹೇಳಿದನು.
7ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟು, “ಈ ಮಹಾ ಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತನಾದ ಮಗನನ್ನು ಅನುಗ್ರಹಿಸಿದ ಯೆಹೋವನಿಗೆ ಈಗ ಸ್ತೋತ್ರವಾಗಲಿ” ಎಂದು ನುಡಿದನು.
8ಇದಲ್ಲದೆ ಅವನು ಸೊಲೊಮೋನನಿಗೆ, “ನೀನು ಹೇಳಿಕಳುಹಿಸಿದ್ದನ್ನು ಕೇಳಿದೆನು. ದೇವದಾರು ವೃಕ್ಷಗಳನ್ನೂ, ತುರಾಯಿ ಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು.
9ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ, ಸಮುದ್ರ ಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ, ಅಲ್ಲಿ ಬಿಚ್ಚಿಸಿಕೊಡುವೆನು. ನೀನು ಅವುಗಳನ್ನು ತೆಗೆದುಕೊಂಡು ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರ ಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ” ಎಂದು ಹೇಳಿ ಕಳುಹಿಸಿದನು.
10ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮರಗಳನ್ನೂ ಮತ್ತು ತುರಾಯಿ ಮರಗಳನ್ನೂ ಕೊಡುತ್ತಿದ್ದನು.
11ಸೊಲೊಮೋನನಾದರೋ ಪ್ರತಿ ವರ್ಷ ಅವನ ಮನೆಯವರ ಆಹಾರಕ್ಕಾಗಿ ಇಪ್ಪತ್ತು ಸಾವಿರ ಕೋರ್ ಗೋದಿಯನ್ನೂ, ಇಪ್ಪತ್ತು ಕೋರ್ ನಿರ್ಮಲವಾದ ಎಣ್ಣೆಯನ್ನೂ ಕೊಡುತ್ತಿದ್ದನು.
12ಯೆಹೋವನು ತಾನು ವಾಗ್ದಾನ ಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಒಳ್ಳೆಯ ಸಂಬಂಧವಿತ್ತು, ಅವರಿಬ್ಬರು ಪರಸ್ಪರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು.