Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನ ದಾರಿಯಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನ ದಾರಿಯಲ್ಲಿ

ಅಶುದ್ಧಾತ್ಮ ಹಿಡಿದಿದ್ದ ಹುಡುಗನು

ಮತ್ತಾ 17:14–20 · ಮಾರ್ಕ 9:14–29 · ಲೂಕ 9:37–43

ಮತ್ತಾಯನು

ಮತ್ತಾ 17:14–20

14ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತಿರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ,

15“ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ.

16ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು.

17ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ” ಅಂದನು.

18ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.

19ತರುವಾಯ ಶಿಷ್ಯರು ಏಕಾಂತವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು ಕೇಳಿದರು?”

20ಆತನು ಅವರಿಗೆ, “ನಿಮ್ಮ ಅಪನಂಬಿಕೆಯಿಂದಲೇ ಆಗಲಿಲ್ಲ. ಸಾಸಿವೇ ಕಾಳಿನಷ್ಟು ನಂಬಿಕೆ ನಿಮಗೆ ಇರುವುದಾದರೆ,

ಮಾರ್ಕನು

ಮಾರ್ಕ 9:14–29

14ತರುವಾಯ ಅವರು ಉಳಿದ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು.

15ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು.

16ಆತನು ಅವರಿಗೆ, “ಇವರ ಸಂಗಡ ಏನು ವಾದಮಾಡುತ್ತೀರಿ?” ಎಂದು ಕೇಳಿದನು.

17ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ.

18ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು.

19ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.

20ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು.

21ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ;

22ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು.

23ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.

24ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು.

25ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು.

26ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು.

27ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.

28ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು.

29ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.

ಲೂಕನು

ಲೂಕ 9:37–43

37ಮರುದಿನ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡಿತು.

38ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು.

39ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ.

40ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು.

41ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.

42ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು.

43ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ,

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು