Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಗಲಿಲಾಯದಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಗಲಿಲಾಯದಲ್ಲಿ

ಶತಾಧಿಪತಿಯ ಸೇವಕನು

ಮತ್ತಾ 8:5–13 · ಲೂಕ 7:1–10

ಮತ್ತಾಯನು

ಮತ್ತಾ 8:5–13

5ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು,

6“ಕರ್ತನೇ, ನನ್ನ ಆಳು ಪಾರ್ಶ್ವವಾಯುವಿನ ನಿಮಿತ್ತ ತೀವ್ರವಾದ ನೋವಿನಿಂದ ಮನೆಯಲ್ಲಿ ಮಲಗಿ ನರಳುತ್ತಿದ್ದಾನೆ” ಎಂದು ಹೇಳಿದನು.

7ಯೇಸು ಅವನಿಗೆ, “ನಾನು ಬಂದು ಅವನನ್ನು ವಾಸಿ ಮಾಡುತ್ತೇನೆ” ಎಂದು ಹೇಳಲು,

8ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.

9ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ; ‘ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು.

10ಯೇಸು ಇದನ್ನು ಕೇಳಿ ಆಶ್ಚರ್ಯಚಕಿತನಾದನು, ತನ್ನ ಹಿಂದೆ ಬರುತ್ತಿದ್ದವರಿಗೆ, “ನಾನು ಇಂಥಾ ಮಹತ್ತರವಾದ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.

11ಇದಲ್ಲದೆ ನಿಮಗೆ ಹೇಳುವುದೇನಂದರೆ ಪೂರ್ವ ಪಶ್ಚಿಮ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಎಂಬುವವರ ಸಂಗಡ ಊಟಕ್ಕೆ ಕುಳಿತುಕೊಳ್ಳುವರು;

12ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು.

13ಬಳಿಕ ಯೇಸು ಆ ಶತಾಧಿಪತಿಗೆ, “ನೀನು ನಂಬಿದಂತೆ ನಿನಗಾಗಲಿ, ಹೋಗು” ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು.

ಲೂಕನು

ಲೂಕ 7:1–10

1ಆತನು ತನ್ನ ಮಾತುಗಳನ್ನೆಲ್ಲಾ ಜನರು ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಕಪೆರ್ನೌಮಿಗೆ ಬಂದನು.

2ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು.

3ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು.

4ಅವರು ಯೇಸುವಿನ ಬಳಿಗೆ ಬಂದು, “ನಿನ್ನಿಂದ ಇಂಥ ಉಪಕಾರ ಹೊಂದುವುದಕ್ಕೆ ಅವನು ಯೋಗ್ಯನು,

5ಅವನು ನಮ್ಮ ದೇಶವನ್ನು ಪ್ರೀತಿಸಿ ಪ್ರಾರ್ಥನೆಗಾಗಿ ನಮಗೆ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿರುವನು” ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು,

6ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ, “ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ. ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ.

7ಈ ಕಾರಣದಿಂದ ನಾನು ನಿಮ್ಮ ಬಳಿಗೆ ಬರುವುದಕ್ಕೆ ನನ್ನನ್ನೇ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.

8ನಾನು ಸಹ ಮತ್ತೊಬ್ಬರ ಅಧಿಕಾರದ ಕೆಳಗಿರುವವನು; ನನ್ನ ಕೈ ಕೆಳಗೆ ಸಿಪಾಯಿಗಳಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಅವನು ಬರುತ್ತಾನೆ; ನನ್ನ ಆಳಿಗೆ ‘ಇಂಥಿಂಥದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಎಂಬುದಾಗಿ ಹೇಳಿಸಿದನು.

9ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ನೋಡಿ, “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.

10ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರುಗಿ ಮನೆಗೆ ಹೋಗಿ ಆಳು ಸ್ವಸ್ಥನಾಗಿರುವುದನ್ನು ಕಂಡರು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು