ಮುಖಪುಟ › ಸಭಾ ವರ್ಷದ ಹಬ್ಬಗಳು › ಪವಿತ್ರ ವಾರ ಮತ್ತು ಈಸ್ಟರ್
ಸಭಾ ವರ್ಷದ ಹಬ್ಬಗಳು
ಪವಿತ್ರ ವಾರ ಮತ್ತು ಈಸ್ಟರ್
ಗರಿಗಳ ಭಾನುವಾರದಿಂದ ಈಸ್ಟರ್‌ವರೆಗೆ ಪವಿತ್ರ ವಾರ: ಯೆರೂಸಲೇಮಿನೊಳಗೆ ಪ್ರವೇಶ, ಕಡೆಯ ಭೋಜನ, ಶ್ರಮೆ ಮತ್ತು ಪುನರುತ್ಥಾನ ಸುವಾರ್ತೆಗಳದೇ ಮಾತುಗಳಲ್ಲಿ, ವಾರದ ಘಟನೆಗಳು ಗಂಟೆಗಂಟೆಗೆ, ಮತ್ತು ಮುಂದಿನ ವರ್ಷಗಳ ಪಾಶ್ಚಾತ್ಯ ಈಸ್ಟರ್ ಮತ್ತು ಆರ್ಥೊಡಾಕ್ಸ್ ಪಾಸ್ಕದ ದಿನಾಂಕಗಳು.
ದಿನಾಂಕಗಳು
| ವರ್ಷ | ಪಾಶ್ಚಾತ್ಯ ಸಭೆಗಳುಈಸ್ಟರ್ ಭಾನುವಾರ | ಆರ್ಥೊಡಾಕ್ಸ್ ಸಭೆಪಾಸ್ಕ |
|---|---|---|
| 2027 | 28 ಮಾರ್ಚ್ 2027ಭಾನುವಾರಗರಿಗಳ ಭಾನುವಾರ: 21 ಮಾರ್ಚ್ 2027ಶುಭ ಶುಕ್ರವಾರ: 26 ಮಾರ್ಚ್ 2027 | 2 ಮೇ 2027ಭಾನುವಾರಗರಿಗಳ ಭಾನುವಾರ: 25 ಏಪ್ರಿಲ್ 2027ಪವಿತ್ರ ಶುಕ್ರವಾರ: 30 ಏಪ್ರಿಲ್ 2027 |
| 2028 | 16 ಏಪ್ರಿಲ್ 2028ಭಾನುವಾರಗರಿಗಳ ಭಾನುವಾರ: 9 ಏಪ್ರಿಲ್ 2028ಶುಭ ಶುಕ್ರವಾರ: 14 ಏಪ್ರಿಲ್ 2028 | 16 ಏಪ್ರಿಲ್ 2028ಭಾನುವಾರಗರಿಗಳ ಭಾನುವಾರ: 9 ಏಪ್ರಿಲ್ 2028ಪವಿತ್ರ ಶುಕ್ರವಾರ: 14 ಏಪ್ರಿಲ್ 2028 |
| 2029 | 1 ಏಪ್ರಿಲ್ 2029ಭಾನುವಾರಗರಿಗಳ ಭಾನುವಾರ: 25 ಮಾರ್ಚ್ 2029ಶುಭ ಶುಕ್ರವಾರ: 30 ಮಾರ್ಚ್ 2029 | 8 ಏಪ್ರಿಲ್ 2029ಭಾನುವಾರಗರಿಗಳ ಭಾನುವಾರ: 1 ಏಪ್ರಿಲ್ 2029ಪವಿತ್ರ ಶುಕ್ರವಾರ: 6 ಏಪ್ರಿಲ್ 2029 |
| 2030 | 21 ಏಪ್ರಿಲ್ 2030ಭಾನುವಾರಗರಿಗಳ ಭಾನುವಾರ: 14 ಏಪ್ರಿಲ್ 2030ಶುಭ ಶುಕ್ರವಾರ: 19 ಏಪ್ರಿಲ್ 2030 | 28 ಏಪ್ರಿಲ್ 2030ಭಾನುವಾರಗರಿಗಳ ಭಾನುವಾರ: 21 ಏಪ್ರಿಲ್ 2030ಪವಿತ್ರ ಶುಕ್ರವಾರ: 26 ಏಪ್ರಿಲ್ 2030 |
| 2031 | 13 ಏಪ್ರಿಲ್ 2031ಭಾನುವಾರಗರಿಗಳ ಭಾನುವಾರ: 6 ಏಪ್ರಿಲ್ 2031ಶುಭ ಶುಕ್ರವಾರ: 11 ಏಪ್ರಿಲ್ 2031 | 13 ಏಪ್ರಿಲ್ 2031ಭಾನುವಾರಗರಿಗಳ ಭಾನುವಾರ: 6 ಏಪ್ರಿಲ್ 2031ಪವಿತ್ರ ಶುಕ್ರವಾರ: 11 ಏಪ್ರಿಲ್ 2031 |
ಒಂದು ದಿನಾಂಕವು ಆರ್ಥೊಡಾಕ್ಸ್ ಅಥವಾ ಕಥೋಲಿಕ ಪಂಚಾಂಗದಲ್ಲಿ ಆ ದಿನದ ವಾಚನಗಳನ್ನು ತೆರೆಯುತ್ತದೆ.
ಆರ್ಥೊಡಾಕ್ಸ್ ದಿನಾಂಕಗಳು ಜೂಲಿಯನ್ ಪಂಚಾಂಗದ ಪ್ರಕಾರ; ಅದನ್ನು ರಷ್ಯನ್, ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತ ಪಾಲಿಸುತ್ತವೆ: ಅವುಗಳ ನಿಗದಿತ ದಿನಾಂಕದ ಹಬ್ಬಗಳು ನಾಗರಿಕ ಪಂಚಾಂಗದಲ್ಲಿ 13 ದಿನಗಳ ನಂತರ ಬರುತ್ತವೆ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ ಮತ್ತು ಇತರರು) ಕ್ರಿಸ್ಮಸ್ ಅನ್ನು 25 ಡಿಸೆಂಬರ್‌ನಂದು ಆಚರಿಸುತ್ತವೆ; ಪಾಸ್ಕ ಮತ್ತು ಅದನ್ನು ಅವಲಂಬಿಸಿರುವ ದಿನಗಳನ್ನು ಹೆಚ್ಚುಕಡಿಮೆ ಎಲ್ಲಾ ಆರ್ಥೊಡಾಕ್ಸ್ ಸಭೆಗಳಲ್ಲಿ ಒಂದೇ ರೀತಿ ಎಣಿಸಲಾಗುತ್ತದೆ.
ಬೈಬಲ್ ವಾಕ್ಯಭಾಗಗಳು
ಮತ್ತಾಯನು
1ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ 2ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ. 3ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು. 4ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ, 5“ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು. 6ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು. 7ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು. 8ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು. 9ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು. 10ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು. 11ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು.
ಯೋಹಾನನು
1ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು. 2ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು. 3ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು. 4ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು. 5ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು. 6ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು. 7ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು. 8ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು. 9ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು. 10ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು. 11ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು. 12ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ? 13ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ. 14ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. 15ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.
ಮತ್ತಾಯನು
17ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು. 18ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು. 19ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು. 20ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು. 21ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು. 22ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು. 23ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು. 24ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು. 25ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು. 26ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು. 27ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, 28ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ. 29ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಸಂಗಡ ಹೊಸದಾಗಿ ದ್ರಾಕ್ಷಾರಸವನ್ನು ಕುಡಿಯುವ ದಿನದವರೆಗೂ ಇನ್ನು ಇದನ್ನು ಕುಡಿಯುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಅಂದನು. 30ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು.
ಯೋಹಾನನು
1ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು. 2ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು. 3ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು. 4ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು. 5ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು. 6ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು. 7ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು. 8ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು. 9ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು. 10ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು. 11ಆಗ ಯೇಸು ಪೇತ್ರನಿಗೆ, “ಕತ್ತಿಯನ್ನು ಒರೆಯಲ್ಲಿ ಹಾಕು. ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು. 12ಆಮೇಲೆ ಆ ಸೈನಿಕರ ಗುಂಪು ಮತ್ತು ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು. 13ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14ಆ ಕಾಯಫನೇ, ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟವನು. 15ಸೀಮೋನ್ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಯವಿದ್ದುದರಿಂದ ಯೇಸುವಿನ ಜೊತೆ ಮಹಾಯಾಜಕನ ಅಂಗಳದೊಳಗೆ ಹೋದನು. 16ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. 17ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು. 18ಚಳಿಯಿದ್ದುದರಿಂದ ಆಳುಗಳೂ, ಓಲೇಕಾರರೂ ಇದ್ದಲಿನ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುತ್ತಾ ನಿಂತಿರಲಾಗಿ; ಪೇತ್ರನೂ ಅವರ ಜೊತೆಯಲ್ಲಿ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು. 19ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು. 20ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ. 21ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು. 22ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು. 23ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು. 24ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು. 25ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು. 26ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು. 27ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು. 28ಮುಂಜಾನೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರೆದುಕೊಂಡು ಹೋದರು. ಅವರು ತಮಗೆ ಮೈಲಿಗೆಯಾಗಿ ಪಸ್ಕದ ಊಟ ಮಾಡುವುದಕ್ಕೆ ಅಡ್ಡಿಯಾದೀತೆಂದು ಅರಮನೆಯ ಒಳಗೆ ಹೋಗಲಿಲ್ಲ. 29ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು. 30ಯೆಹೂದ್ಯರು ಅವನಿಗೆ, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿ ಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು. 31ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಆತನಿಗೆ ತೀರ್ಪು ಮಾಡಿರಿ” ಎಂದು ಹೇಳಿದನು. ಅದಕ್ಕೆ ಯೆಹೂದ್ಯರು, “ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗೆ ಇಲ್ಲ” ಎಂದರು. 32ಇದರಿಂದ ಯೇಸು ತಾನು ಎಂಥಾ ಮರಣವನ್ನು ಹೊಂದುವನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು. 33ಆಗ ಪಿಲಾತನು ಪುನಃ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಆತನಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. 34ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೇ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?” ಎಂದನು. 35ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ, ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದ್ದಕ್ಕೆ, 36ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ನನ್ನ ಪರವಾಗಿ ಹೋರಾಡುತ್ತಿದ್ದರು, ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ” ಎಂದು ಉತ್ತರಕೊಟ್ಟನು. 37ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು. 38ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ. 39ಆದರೆ ಪಸ್ಕ ಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟು ಕೊಡುವ ಪದ್ಧತಿ ಉಂಟಷ್ಟೆ. ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟು ಕೊಡುವುದು ನಿಮಗೆ ಇಷ್ಟವೋ?” ಎಂದು ಅವರನ್ನು ಕೇಳಿದನು. 40ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು. 19:1ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು. 2ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ, 3ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು. 4ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು. 5ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು. 6ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು. 7ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು. 8ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು, 9ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ. 10ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು. 11ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು. 12ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು. 13ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು. 14ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು. 15ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು. 16ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. 17ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ. 18ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು. 19ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು. 20ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. 21ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು. 22ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು. 23ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು. 25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. 26ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. 27ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು. 28ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು. 29ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. 30ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. 31ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು. 32ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು. 33ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. 34ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು. 35ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ. 36ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು. 37“ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ. 38ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು. 39ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು. 40ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು. 41ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ. 42ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.
ಮತ್ತಾಯನು
1ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು. 2ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು. 3ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು. 5ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು; 6ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; 7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು. 8ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.
ಮಾರ್ಕನು
1ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು. 2ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು. 3“ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. 4ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು. 5ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು. 6ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ, 7ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು. 8ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.
ಲೂಕನು
1ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು. 2ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು, 3ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ. 4ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು. 5ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು? 6ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು. 8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು, 9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. 11ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು. 12ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
ಯೋಹಾನನು
1ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ಉರುಳಿ ಹೋಗಿರುವುದನ್ನು ಕಂಡಳು. 2ಆಗ ಆಕೆಯು ಸೀಮೋನ್ ಪೇತ್ರನ ಬಳಿಗೂ ಮತ್ತು ಯೇಸುವಿಗೆ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು” ಹೇಳಿದಳು 3ಆಗ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು. 4ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ವೇಗವಾಗಿ ಓಡಿ ಮೊದಲೇ ಸಮಾಧಿಗೆ ಬಂದನು. 5ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಹೋಗಲಿಲ್ಲ. 6ಸೀಮೋನ್ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ, ಆ ನಾರುಬಟ್ಟೆಗಳು ಬಿದ್ದಿರುವುದನ್ನೂ 7ಆತನ ತಲೆಯ ಮೇಲಿದ್ದ ಕೈವಸ್ತ್ರವು, ಆ ನಾರು ಬಟ್ಟೆಗಳೊಂದಿಗೆ ಇರದೇ, ಸುತ್ತಿ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿದನು. 8ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು. 9ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬುದಾಗಿ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ. 10ತರುವಾಯ ಆ ಶಿಷ್ಯರು ಪುನಃ ತಮ್ಮ ಮನೆಗೆ ಹೋದರು. 11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು, 12ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು. 13ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ. 15ಯೇಸು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳಲು, ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ, “ಅಯ್ಯಾ, ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದಳು. 16ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ಅವನ ಕಡೆಗೆ ತಿರುಗಿ ಇಬ್ರಿಯ ಭಾಷೆಯಲ್ಲಿ ಆತನಿಗೆ, “ರಬ್ಬೂನಿ” ಎಂದಳು. ಹಾಗೆಂದರೆ ಗುರುವೇ ಎಂದರ್ಥ. 17ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. 18ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.
ಮತ್ತಾಯ, ಮಾರ್ಕ ಮತ್ತು ಲೂಕನಲ್ಲಿ ಯೇಸುವಿನ ಶ್ರಮೆ
ಪವಿತ್ರ ವಾರ
ಸುವಾರ್ತೆಗಳು ಹೇಳುವಂತೆ, ಘಟನೆಗಳನ್ನು ಗಂಟೆಗಂಟೆಗೂ ಹಿಂಬಾಲಿಸಿ.
ಗರಿಗಳ ಭಾನುವಾರ
- ಹಗಲಿನಲ್ಲಿಸಂಪ್ರದಾಯ ನಿರ್ಧರಿಸಿದ ದಿನಯೆರೂಸಲೇಮ್ ಪ್ರವೇಶ
ಯೇಸು ಕತ್ತೆಯ ಮೇಲೆ ಕುಳಿತು ಪಟ್ಟಣದೊಳಕ್ಕೆ ಬರುತ್ತಾನೆ; ಜನಸಮೂಹ ಖರ್ಜೂರದ ಗರಿಗಳೊಂದಿಗೆ ಆತನನ್ನು ಸ್ವಾಗತಿಸುತ್ತದೆ.
ಪವಿತ್ರ ಸೋಮವಾರ
- ಹಗಲಿನಲ್ಲಿಪಠ್ಯದಲ್ಲಿ ನೀಡಿದ ಸಮಯದೇವಾಲಯದ ಶುದ್ಧೀಕರಣ
ಯೇಸು ವ್ಯಾಪಾರಿಗಳನ್ನು ದೇವಾಲಯದಿಂದ ಹೊರಗಟ್ಟುತ್ತಾನೆ. ಮಾರ್ಕನ ಸುವಾರ್ತೆಯಲ್ಲಿ ಇದು ಪ್ರವೇಶದ ಮರುದಿನ ನಡೆಯುತ್ತದೆ.
ಪವಿತ್ರ ಮಂಗಳವಾರ
- ಹಗಲಿನಲ್ಲಿಪಠ್ಯದಲ್ಲಿ ನೀಡಿದ ಸಮಯದೇವಾಲಯದಲ್ಲಿ ಬೋಧನೆ
ಶಾಸ್ತ್ರಿಗಳೊಂದಿಗೂ ಫರಿಸಾಯರೊಂದಿಗೂ ವಾಗ್ವಾದಗಳು, ಸಾಮ್ಯಗಳು, ಮತ್ತು ಎಣ್ಣೆಯ ಮರಗಳ ಗುಡ್ಡದ ಮೇಲೆ ಯುಗದ ಅಂತ್ಯದ ಕುರಿತು ಮಾತು.
ಪವಿತ್ರ ಬುಧವಾರ
- ಹಗಲಿನಲ್ಲಿಪಠ್ಯದಲ್ಲಿ ನೀಡಿದ ಸಮಯಬೇಥಾನ್ಯದಲ್ಲಿ ಅಭಿಷೇಕ
ಒಬ್ಬ ಸ್ತ್ರೀ ಯೇಸುವಿನ ತಲೆಯ ಮೇಲೆ ಸುಗಂಧ ತೈಲವನ್ನು ಸುರಿಯುತ್ತಾಳೆ; ಯೂದನು ಆತನನ್ನು ಹಿಡಿದುಕೊಡಲು ಒಪ್ಪುತ್ತಾನೆ. ಮಾರ್ಕನು ಇದನ್ನು ಪಸ್ಕಕ್ಕೆ ಎರಡು ದಿನ ಮೊದಲು ಇಡುತ್ತಾನೆ.
ಪವಿತ್ರ ಗುರುವಾರ
- 19:00–21:30ಪಠ್ಯದಲ್ಲಿ ನೀಡಿದ ಸಮಯಕಡೆಯ ಭೋಜನ
ಸಂಜೆ ಯೇಸು ಹನ್ನೆರಡು ಮಂದಿಯೊಂದಿಗೆ ಪಸ್ಕವನ್ನು ಆಚರಿಸುತ್ತಾನೆ, ಅವರ ಪಾದಗಳನ್ನು ತೊಳೆಯುತ್ತಾನೆ ಮತ್ತು ರೊಟ್ಟಿಯನ್ನು ಮುರಿಯುತ್ತಾನೆ.
- 21:30–23:00ಪಠ್ಯದಲ್ಲಿ ನೀಡಿದ ಸಮಯವಿದಾಯದ ಬೋಧನೆ
ಶಿಷ್ಯರಿಗೆ ಯೇಸುವಿನ ಕಡೆಯ ಮಾತುಗಳು ಮತ್ತು ಅವರಿಗಾಗಿ ಆತನ ಪ್ರಾರ್ಥನೆ.
- 23:00–00:30ಪಠ್ಯದಲ್ಲಿ ನೀಡಿದ ಸಮಯಗೆತ್ಸೇಮನೆ
ರಾತ್ರಿಯಲ್ಲಿ ಶಿಷ್ಯರು ನಿದ್ರಿಸುತ್ತಿರುವಾಗ ಯೇಸು ತೋಟದಲ್ಲಿ ಪ್ರಾರ್ಥಿಸುತ್ತಾನೆ.
ಶುಭ ಶುಕ್ರವಾರ · ಪವಿತ್ರ ಶುಕ್ರವಾರ
- 00:30–01:30ಪಠ್ಯದಲ್ಲಿ ನೀಡಿದ ಸಮಯಬಂಧನ
ಯೂದನು ಕಾವಲುಗಾರರೊಂದಿಗೆ ಬರುತ್ತಾನೆ, ಮತ್ತು ಯೇಸುವನ್ನು ಕರೆದುಕೊಂಡು ಹೋಗಲಾಗುತ್ತದೆ.
- 01:30–05:30ಪಠ್ಯದಲ್ಲಿ ನೀಡಿದ ಸಮಯಮಹಾಯಾಜಕನ ಮುಂದೆ
ರಾತ್ರಿಯ ವಿಚಾರಣೆ. ಪೇತ್ರನು ಆತನನ್ನು ಮೂರು ಸಾರಿ ಅರಿಯೆನೆನ್ನುತ್ತಾನೆ, ಮತ್ತು ಹುಂಜ ಕೂಗುತ್ತದೆ.
- 05:30–06:30ಪಠ್ಯದಲ್ಲಿ ನೀಡಿದ ಸಮಯಬೆಳಗಿನ ಸಭೆ
ಬೆಳಗಾಗುತ್ತಲೇ ಹಿರಿಯರು ಯೇಸುವನ್ನು ಪಿಲಾತನಿಗೆ ಒಪ್ಪಿಸಲು ತೀರ್ಮಾನಿಸುತ್ತಾರೆ.
- 06:30–09:00ಪಠ್ಯದಲ್ಲಿ ನೀಡಿದ ಸಮಯಪಿಲಾತನ ಮುಂದೆ
ಪಿಲಾತನೂ ಹೆರೋದನೂ ಯೇಸುವನ್ನು ವಿಚಾರಿಸುತ್ತಾರೆ. ಜನಸಮೂಹ ಬರಬ್ಬನನ್ನು ಆರಿಸಿಕೊಳ್ಳುತ್ತದೆ, ಮತ್ತು ಯೇಸುವಿಗೆ ಕೊರಡೆಗಳಿಂದ ಹೊಡೆಸಲಾಗುತ್ತದೆ.
- 09:00–12:00 · ಮೂರನೆಯ ತಾಸುಪಠ್ಯದಲ್ಲಿ ನೀಡಿದ ಸಮಯಶಿಲುಬೆಗೇರಿಸುವಿಕೆ
ಬೆಳಿಗ್ಗೆ ಸುಮಾರು 9 ಗಂಟೆ (ಮಾರ್ಕನು 15:25). ಯೋಹಾನನ ಸುವಾರ್ತೆಯಲ್ಲಿ ಆರನೆಯ ತಾಸಿನ ಸುಮಾರಿಗೂ ವಿಚಾರಣೆ ಇನ್ನೂ ನಡೆಯುತ್ತಿದೆ (ಯೋಹಾನನು 19:14); ವ್ಯಾಖ್ಯಾನಕಾರರು ಇದನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ.
- 12:00–15:00 · ಆರನೆಯ ತಾಸುಪಠ್ಯದಲ್ಲಿ ನೀಡಿದ ಸಮಯದೇಶದ ಮೇಲೆ ಕತ್ತಲೆ
ಆರನೆಯ ತಾಸಿನಿಂದ ಒಂಬತ್ತನೆಯ ತಾಸಿನವರೆಗೆ, ಸುಮಾರು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ, ದೇಶದ ಮೇಲೆಲ್ಲಾ ಕತ್ತಲೆ ಕವಿಯುತ್ತದೆ.
- 15:00–17:00 · ಒಂಬತ್ತನೆಯ ತಾಸುಪಠ್ಯದಲ್ಲಿ ನೀಡಿದ ಸಮಯಶಿಲುಬೆಯ ಮೇಲೆ ಮರಣ
ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಡುತ್ತಾನೆ.
- 17:00–19:00ಪಠ್ಯದಲ್ಲಿ ನೀಡಿದ ಸಮಯಸಮಾಧಿ ಮಾಡುವಿಕೆ
ಸಂಜೆ, ಸಬ್ಬತ್ ಆರಂಭವಾಗುವ ಮೊದಲು, ಅರಿಮಥಾಯದ ಯೋಸೇಫನು ದೇಹವನ್ನು ಸಮಾಧಿಯಲ್ಲಿ ಇಡುತ್ತಾನೆ.
ಪವಿತ್ರ ಶನಿವಾರ
- ಹಗಲಿನಲ್ಲಿಪಠ್ಯದಲ್ಲಿ ನೀಡಿದ ಸಮಯಸಬ್ಬತ್
ಯೇಸುವಿನೊಂದಿಗೆ ಗಲಿಲಾಯದಿಂದ ಬಂದ ಸ್ತ್ರೀಯರು ಆಜ್ಞೆಯ ಪ್ರಕಾರ ವಿಶ್ರಮಿಸಿಕೊಳ್ಳುತ್ತಾರೆ; ಸಮಾಧಿಗೆ ಕಾವಲು ಇಡಲಾಗುತ್ತದೆ.
ಈಸ್ಟರ್ ಭಾನುವಾರ · ಪಾಸ್ಕ
- 05:00–08:00ಪಠ್ಯದಲ್ಲಿ ನೀಡಿದ ಸಮಯಪುನರುತ್ಥಾನ
ಬಹು ಮುಂಜಾನೆ, ಬೆಳಗಾಗುವಾಗ, ಸ್ತ್ರೀಯರು ಸಮಾಧಿಯ ಬಳಿಗೆ ಬಂದು ಅದು ಬರಿದಾಗಿರುವುದನ್ನು ಕಾಣುತ್ತಾರೆ.
- 15:00–18:00ಪಠ್ಯದಲ್ಲಿ ನೀಡಿದ ಸಮಯಎಮ್ಮಾಹುವಿನ ದಾರಿ
ಇಬ್ಬರು ಶಿಷ್ಯರು ಎಮ್ಮಾಹುವಿಗೆ ನಡೆದುಕೊಂಡು ಹೋಗುತ್ತಾರೆ. ಎದ್ದುಬಂದ ಕರ್ತನು ಅವರೊಂದಿಗೆ ನಡೆಯುತ್ತಾನೆ, ಮತ್ತು ಸಂಜೆಯ ಹೊತ್ತಿಗೆ ಅವರು ಆತನನ್ನು ಗುರುತಿಸುತ್ತಾರೆ.
- 18:00–21:00ಪಠ್ಯದಲ್ಲಿ ನೀಡಿದ ಸಮಯಯೇಸು ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾನೆ
ಅದೇ ದಿನದ ಸಂಜೆ, ಬಾಗಿಲುಗಳು ಮುಚ್ಚಿದ್ದರೂ, ಯೇಸು ಶಿಷ್ಯರ ಬಳಿಗೆ ಬರುತ್ತಾನೆ.
ಕಲೆಯಲ್ಲಿ
ಕಡೆಯ ಭೋಜನಉಗೊಲಿನೊ ದಾ ಸಿಯೆನಾ · c. 1325
ಕನ್ಯೆ ಮರಿಯ, ಸಂತ ಯೋಹಾನ, ಸಂತ ಜೆರೋಮ್ ಮತ್ತು ಮಗ್ದಲದ ಸಂತ ಮರಿಯಳೊಂದಿಗೆ ಶಿಲುಬೆಗೇರಿಸುವಿಕೆಪೆರುಜಿನೊ · c. 1482/1485
ಜನರ ಮುಂದೆ ನಿಲ್ಲಿಸಲ್ಪಟ್ಟ ಕ್ರಿಸ್ತನು (ಎಚೆ ಹೋಮೊ)ಸೊಡೊಮಾ · c. 1540–49
ಸಮಾಧಿಯಲ್ಲಿಡುವಿಕೆರೂಬೆನ್ಸ್ · c. 1612
ತೋಟಗಾರನಂತೆ ಮಗ್ದಲದ ಮರಿಯಳಿಗೆ ಕಾಣಿಸಿಕೊಳ್ಳುವ ಕ್ರಿಸ್ತನು (ನೋಲಿ ಮೆ ಟಾಂಗೆರೆ)ರೂಬೆನ್ಸ್ ಅವರ ಕಾರ್ಯಾಗಾರ · c. 1615–1618
ಕ್ರಿಸ್ತನನ್ನು ಹಿಡಿದುಕೊಡುವುದುಯಾಕೊಬ್ ಯೋರ್ಡಾನ್ಸ್ · 1655–1659
ಕ್ರಿಸ್ತನ ಯೆರೂಸಲೇಮ್ ಪ್ರವೇಶಡ್ಯೂರರ್ · c. 1509/1510?
ಶಿಷ್ಯರ ಪಾದಗಳನ್ನು ತೊಳೆಯುತ್ತಿರುವ ಕ್ರಿಸ್ತನುಗರೊಫಾಲೊ · c. 1520/1525
ಶಿಲುಬೆಯನ್ನು ಹೊತ್ತ ಕ್ರಿಸ್ತನುಎಲ್ ಗ್ರೆಕೊ · c. 1577–87
ಪುನರುತ್ಥಾನಬೆನ್ವೆನುತೊ ದಿ ಜೊವಾನ್ನಿ · 1491?
ಯೆರೂಸಲೇಮಿಗೆ ಪ್ರವೇಶಗುಸ್ತಾವ್ ಡೋರೆ · 1866
ಕಡೆಯ ಭೋಜನಗುಸ್ತಾವ್ ಡೋರೆ · 1866
ಇನ್ನಷ್ಟು ಹಬ್ಬಗಳು
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು