Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 16 ಡಿಸೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 16 ಡಿಸೆಂಬರ್ 2027

ಗುರುವಾರ · ಆಗಮನ ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ಆಗಮನ ಕಾಲದ ಮೂರನೆಯ ವಾರದ ಗುರುವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 54:1–10

1“ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವ ವೇದನೆಯನ್ನು ಅನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು! ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಯೆಹೋವನು ಹೇಳುತ್ತಾನೆ. 2ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು. 3ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳು ಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು. 4“ಹೆದರಬೇಡ, ನಿನಗೆ ಅವಮಾನವಾಗುವುದಿಲ್ಲ, ನಾಚಿಕೆಪಡದಿರು, ನಿನಗೆ ಆಶಾಭಂಗವಾಗದು; ಯೌವನದಲ್ಲಿ ನಿನಗಾದ ಅವಮಾನವನ್ನು ಮರೆತುಬಿಡುವಿ, ವೈಧವ್ಯದಲ್ಲಿ ನಿನಗೆ ಸಂಭವಿಸಿದ ನಿಂದೆಯು ಇನ್ನು ನಿನ್ನ ನೆನಪಿಗೆ ಬಾರದು. 5“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. 6ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ. 7“ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು. 8ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು, ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ. 9“ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಳಯದಂತಿದೆ; ಇಂತಹ ಜಲಪ್ರಳಯವು ಭೂಮಿಯನ್ನು ಪುನಃ ಆವರಿಸುವುದಿಲ್ಲ ಎಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವುದಿಲ್ಲ, ಗದರಿಸುವುದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ. 10ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.

ಪ್ರತಿವಚನ ಕೀರ್ತನೆ

ಕೀರ್ತ 30:1, 3–5, 10–12

1ದಾವೀದನ ಕೀರ್ತನೆ, ದೇವಾಲಯದ ಪ್ರತಿಷ್ಠೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ನನ್ನ ಶತ್ರುಗಳು ಸಂತೋಷಿಸುವುದಕ್ಕೆ ಅವಕಾಶಕೊಡದೆ, ನನ್ನನ್ನು ಉದ್ಧರಿಸಿದ್ದರಿಂದ ನಿನ್ನನ್ನು ಕೊಂಡಾಡುವೆನು. 3ಯೆಹೋವನೇ, ನನ್ನ ಪ್ರಾಣವನ್ನು ಪಾತಾಳದಿಂದಲೂ ಎತ್ತಿದಿಯಲ್ಲಾ; ನನ್ನನ್ನು ಸಮಾಧಿಯಲ್ಲಿ ಸೇರಿಸದೆ ಬದುಕಿಸಿದಿಯಲ್ಲಾ. 4ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ. 5ಆತನ ಕೋಪವು ಕ್ಷಣಮಾತ್ರವೇ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವುದು; ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ, ಮುಂಜಾನೆ ಹರ್ಷಧ್ವನಿಯು ಕೇಳಿಸುವುದು. 10ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ” ಎಂದು ಹೇಳಿದೆನು. 11ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ, ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು, ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ. 12ಇದರಿಂದ ಯೆಹೋವನೇ, ನನ್ನ ಮನಸ್ಸು ಎಡೆಬಿಡದೆ ನಿನ್ನನ್ನು ಕೀರ್ತಿಸುತ್ತಿರುವುದು; ನನ್ನ ದೇವರೇ, ನಿನ್ನನ್ನು ಸದಾಕಾಲವೂ ಸ್ತುತಿಸುವೆನು.

ಸುವಾರ್ತೆ

ಲೂಕ 7:24–30

24ಯೋಹಾನನ ಶಿಷ್ಯರು ಹಿಂತಿರುಗಿ ಹೋಗಲು ಆತನು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ, “ಏನು ನೋಡಬೇಕೆಂದು ಮರುಭೂಮಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 25ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. 26ಹಾಗಾದರೆ ನೀವು ಏನು ನೋಡಬೇಕೆಂದು ಹೋಗಿದ್ದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದಿರಿ ಎಂದು ನಿಮಗೆ ಹೇಳುತ್ತೇನೆ. 27‘ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ. ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸಿದ್ಧಮಾಡುವನು,’ ಎಂದು ಯಾರ ವಿಷಯವಾಗಿ ಬರೆದದೆಯೋ, ಆ ಪುರುಷನು ಅವನೇ. 28ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಯೋಹಾನನಿಗಿಂತ ಮಹಾಪುರುಷನು ಒಬ್ಬನೂ ಹುಟ್ಟಿಲ್ಲ, ಅದರೂ ದೇವರ ರಾಜ್ಯದಲ್ಲಿ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು” ನಿಮಗೆ ಹೇಳುತ್ತೇನೆ. 29ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ಜನರೆಲ್ಲರೂ, ಸುಂಕದವರೂ ಸಹ ಆತನ ಉಪದೇಶವನ್ನು ಕೇಳಿದಾಗ, ದೇವರು ನೀತಿವಂತನೆಂದು ಒಪ್ಪಿಕೊಂಡರು. 30ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ಅವರು ತಮ್ಮ ಕುರಿತಾದ ದೈವಸಂಕಲ್ಪವನ್ನು ನಿರಾಕರಿಸಿದರು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು