Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 15 ಡಿಸೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 15 ಡಿಸೆಂಬರ್ 2027

ಬುಧವಾರ · ಆಗಮನ ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ಆಗಮನ ಕಾಲದ ಮೂರನೆಯ ವಾರದ ಬುಧವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 45:6–8, 18, 21–25

6ಪೂರ್ವದಿಂದ ಪಶ್ಚಿಮದ ತನಕ ಇರುವವರೆಲ್ಲರೂ ಇದನ್ನು ನೋಡಿ, ನನ್ನ ಹೊರತು ಯಾರೂ ಇಲ್ಲ, ನಾನೇ ಯೆಹೋವನು. 7ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು, ಮೇಲನ್ನೂ, ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು. 8ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ಮಳೆಯಂತೆ ಸುರಿಸು. ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ, ಅದರೊಡನೆ ನೀತಿಫಲವನ್ನು ಬೆಳೆಯಿಸಲಿ. ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು. 18ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ, ಆತನೇ ದೇವರು. ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು. ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗೆನ್ನುತ್ತಾನೆ, “ನಾನೇ ಯೆಹೋವನು, ಇನ್ನು ಯಾರೂ ಇಲ್ಲ. 21ಹೇಳಿರಿ, ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ, ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಆಲೋಚಿಸಿಕೊಳ್ಳಲಿ. ಪೂರ್ವದಿಂದಲೂ ಈ ಸಂಗತಿಯನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮೊದಲೇ ಯಾರು ತಿಳಿಸಿದರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ಸತ್ಯಸ್ವರೂಪನೂ, ರಕ್ಷಕನಾದ ದೇವರು ಇಲ್ಲವೇ ಇಲ್ಲ. 22ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ. 23ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ಸತ್ಯದ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು. ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು. 24ಯೆಹೋವನಲ್ಲಿ ಮಾತ್ರ ರಕ್ಷಣೆಯೂ, ಶಕ್ತಿಯೂ ಉಂಟು. ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಪಟ್ಟು ಆತನನ್ನು ಆಶ್ರಯಿಸುವರು. 25ಇಸ್ರಾಯೇಲಿನ ಸಮಸ್ತ ಸಂತತಿಯವರೂ ಯೆಹೋವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು” ಎಂದು ನನ್ನ ವಿಷಯವಾಗಿ ಜನರು ಅಂದುಕೊಳ್ಳುತ್ತಾರೆ.

ಪ್ರತಿವಚನ ಕೀರ್ತನೆ

ಕೀರ್ತ 85:8–13

8ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 9ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು. 10ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು. 13ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.

ಸುವಾರ್ತೆ

ಲೂಕ 7:19–23

19ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವನು ನೀನೋ ಅಥವಾ ನಾವು ಬೇರೊಬ್ಬನಿಗಾಗಿ ಕಾಯಬೇಕೋ?” ಎಂದು ಕರ್ತನನ್ನು ಕೇಳಲು ಹೇಳಿಕಳುಹಿಸಿದನು. 20ಅವರು ಯೇಸುವಿನ ಬಳಿಗೆ ಬಂದು, “‘ಬರಬೇಕಾದವನು ನೀನೋ ಅಥವಾ ನಾವು ಮತ್ತೊಬ್ಬನ ಬರುವಿಕೆಗಾಗಿ ಕಾಯಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಅಂದರು. 21ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು. 22ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ. 23ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು” ಎಂದು ಹೇಳಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು