Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 13 ಆಗಸ್ಟ್

ಆರ್ಥೊಡಾಕ್ಸ್ ಪಂಚಾಂಗ · ಜುಲೈ 31 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 13 ಆಗಸ್ಟ್ 2027

ಶುಕ್ರವಾರ · ಪಂಚಾಶತ್ತಮದ ನಂತರದ ಎಂಟನೆಯ ವಾರ · ಸ್ವರ 6

ಹಬ್ಬಗಳು ಮತ್ತು ಸಂತರು

Forefeast of the Procession of the Venerable and Life-Creating Cross of the Lord

ಉಪವಾಸದ ದಿನ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ

1 ಕೊರಿ 11:8–22

8ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. 9ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು. 10ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು. 11ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ. 12ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು. 13ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ 14ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ, 15ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ? 16ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ. 17ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ. 18ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ. 19ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ. 20ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ. 21ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ. 22ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.

ಪತ್ರಿಕೆ (ಶನಿವಾರಕ್ಕೆ)

ರೋಮಾ 13:1–10

1ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು. 2ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು. 3ಕೆಟ್ಟಕೆಲಸ ಮಾಡುವವನಿಗೆ ಅಧಿಪತಿಯಿಂದ ಭಯವಿರುವುದೇ ಹೊರತು ಒಳ್ಳೆಕೆಲಸ ಮಾಡುವವನಿಗೆ ಭಯವೇನೂ ಇರುವುದಿಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಬೇಕೆಂದು ಅಪೇಕ್ಷಿಸುತ್ತೀಯೋ ಒಳ್ಳೆಯದನ್ನು ಮಾಡು. ಆಗ ಆ ಅಧಿಕಾರಿಯೇ ನಿನ್ನನ್ನು ಹೊಗಳುವನು. 4ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ. 5ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಾಕ್ಷಿಗೆ ಒಪ್ಪುವಂತೆಯು ಅವನಿಗೆ ಅಧೀನನಾಗಿರು. 6ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕೆಂದರೆ ಕಂದಾಯ ಸಂಗ್ರಹಿಸುವವರು ದೇವರ ಸೇವಕರಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ. 7ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ. 8ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮ್ಮ ಮೇಲೆ ಇರಬಾರದು. ತನ್ನ ನೆರೆಹೊರೆಯವರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನೆಲ್ಲಾ ನೆರವೇರಿಸಿದ್ದಾನೆ. 9ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. 10ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಶಾಸ್ತ್ರವು ನೆರವೇರುತ್ತದೆ.

ಸುವಾರ್ತೆ

ಮತ್ತಾ 17:10–18

10ಆಗ ಆತನ ಶಿಷ್ಯರು, “ಎಲೀಯನು ಮೊದಲು ಬರುವುದು ಅವಶ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ ಏಕೆ?” ಎಂದು ಆತನನ್ನು ಕೇಳಿದರು. 11ಯೇಸು ಅವರಿಗೆ, “ಎಲೀಯನು ಮೊದಲು ಬರುವುದು ನಿಜ. ಬಂದು ಎಲ್ಲವನ್ನು ಪುನಃ ಸ್ಥಾಪಿಸುವನು. 12ಆದರೆ ನಾನು ನಿಮಗೆ ಹೇಳುತ್ತೇನೆ, ಎಲೀಯನು ಬಂದಾಯಿತು, ಆದರೆ ಜನರು ಅವನನ್ನು ಗುರುತಿಸದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದರು. ಅದರಂತೆಯೇ ಮನುಷ್ಯಕುಮಾರನು ಸಹ ಅವರಿಂದ ಹಿಂಸೆಗೊಳಗಾಗುವನು” ಎಂದು ಉತ್ತರ ಕೊಟ್ಟನು. 13ಸ್ನಾನಿಕನಾದ ಯೋಹಾನನ ವಿಷಯವಾಗಿ ತಮ್ಮೊಂದಿಗೆ ಮಾತನಾಡಿದನೆಂದು ಆಗ ಶಿಷ್ಯರು ತಿಳಿದುಕೊಂಡರು. 14ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತಿರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ, 15“ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ. 16ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು. 17ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ” ಅಂದನು. 18ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.

ಸುವಾರ್ತೆ (ಶನಿವಾರಕ್ಕೆ)

ಮತ್ತಾ 12:30–37

30ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ. 31ಆದಕಾರಣ ನಿಮಗೆ ಹೇಳುತ್ತೇನೆ ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವುದು. ಆದರೆ ಪವಿತ್ರಾತ್ಮನಿಗೆ ವಿರುದ್ಧವಾಗಿ ನುಡಿಯುವ ದೂಷಣೆಗೆ ಕ್ಷಮಾಪಣೆಯಿರುವುದಿಲ್ಲ. 32ಯಾವನಾದರೂ ಮನುಷ್ಯಕುಮಾರನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವುದು, ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಈ ಲೋಕದಲ್ಲಾಗಲಿ ಮುಂಬರುವ ಲೋಕದಲ್ಲಾಗಲಿ ಕ್ಷಮಿಸಲ್ಪಡುವುದಿಲ್ಲ. 33“ಮರ ಒಳ್ಳೆಯದಾದರೆ ಅದರ ಫಲವು ಒಳ್ಳೆಯದೆನ್ನಿರಿ. ಮರ ಕೆಟ್ಟದಾದರೆ ಅದರ ಫಲವು ಕೆಟ್ಟದು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವುದು. 34ಸರ್ಪ ಸಂತತಿಯವರೇ ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವುದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು. 35ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ. 36ಇದಲ್ಲದೆ ನಾನು ನಿಮಗೆ ಹೇಳುವುದೇನಂದರೆ, ಮನುಷ್ಯರು ವ್ಯರ್ಥವಾಗಿ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿಯೂ ನ್ಯಾಯವಿಚಾರಣೆಯ ದಿನದಲ್ಲಿ ಲೆಕ್ಕ ಕೊಡಬೇಕು. 37ನಿನ್ನ ಮಾತುಗಳಿಂದಲೇ ನೀನು ನೀತಿವಂತನೆಂದು ತೀರ್ಪು ಹೊಂದುವಿ. ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ತೀರ್ಪು ಹೊಂದುವಿ” ಅಂದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 31 ಜುಲೈ ಎಂದರೆ ನಾಗರಿಕ ಪಂಚಾಂಗದ 13 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು