Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 14 ಆಗಸ್ಟ್

ಆರ್ಥೊಡಾಕ್ಸ್ ಪಂಚಾಂಗ · ಆಗಸ್ಟ್ 1 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 14 ಆಗಸ್ಟ್ 2027

ಶನಿವಾರ · ಪಂಚಾಶತ್ತಮದ ನಂತರದ ಎಂಟನೆಯ ವಾರ · ಸ್ವರ 6

ಹಬ್ಬಗಳು ಮತ್ತು ಸಂತರು

Procession of the Honorable Wood of the Life-giving Cross of the Lord

ದೇವಮಾತೆಯ ನಿದ್ರಾಗಮನದ ಉಪವಾಸ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ (ಶಿಲುಬೆ)

1 ಕೊರಿ 1:18–24

18ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ. 19“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ವಿಫಲಗೊಳಿಸುವೆನು.” ಎಂದು ಬರೆಯಲ್ಪಟ್ಟಿದೆ. 20ಜ್ಞಾನಿಯು ಎಲ್ಲಿ? ವಿದ್ವಾಂಸನು ಎಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕದ ಜ್ಞಾನವನ್ನು ಮೂರ್ಖತನವಾಗಿ ಮಾಡಿದ್ದಾನಲ್ಲವೇ? 21ಲೋಕವು ತನ್ನ ಜ್ಞಾನದಿಂದ ದೇವರನ್ನು ತಿಳಿದುಕೊಳ್ಳದೆ ಹೋದದ್ದರಿಂದ; ಮೂರ್ಖತನವೆನಿಸಿಕೊಂಡಿರುವ ನಮ್ಮ ಬೋಧನೆಯ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಹಿತವೆಂದು ತೋರಿತು. 22ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; 23ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಗ್ರೀಕರಿಗೆ ಮೂರ್ಖತನವೂ ಆಗಿದೆ. 24ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ.

ಪತ್ರಿಕೆ (ಹುತಾತ್ಮರು)

ಇಬ್ರಿ 11:33–12:2

33ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು., 34ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು. 35ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು. 36ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು. 37ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. 38ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು. 39ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, ವಾಗ್ದಾನದ ಫಲವನ್ನು ಹೊಂದಲಿಲ್ಲ. 40ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು. 12:1ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.

ಸುವಾರ್ತೆ (ಶಿಲುಬೆ)

ಯೋಹಾ 19:6–11, 13–20, 25–28, 30–35

6ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು. 7ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು. 8ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು, 9ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ. 10ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು. 11ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು. 13ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು. 14ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು. 15ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು. 16ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. 17ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ. 18ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು. 19ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು. 20ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. 25ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. 26ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. 27ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು. 28ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು. 30ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. 31ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು. 32ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು. 33ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. 34ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು. 35ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.

ಸುವಾರ್ತೆ (ಹುತಾತ್ಮರು)

ಮತ್ತಾ 10:32–36; 11:1

32“ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. 33ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು. 34“ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು. 35ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು. 36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು. 11:1ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆಕೊಡುವುದನ್ನು ಮುಗಿಸಿದ ಬಳಿಕ ಅವರ ಪಟ್ಟಣಗಳಲ್ಲಿ ಉಪದೇಶಮಾಡುವುದಕ್ಕೂ ಬೋಧಿಸುವುದಕ್ಕೂ ಅಲ್ಲಿಂದ ಹೊರಟು ಹೋದನು.

ಪತ್ರಿಕೆ (ಜಲದ ಆಶೀರ್ವಾದದಲ್ಲಿ)

ಇಬ್ರಿ 2:11–18

11ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ. 12“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ, 13“ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ. 14ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, 15ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. 16ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ. 17ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು. 18ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.

ಸುವಾರ್ತೆ (ಜಲದ ಆಶೀರ್ವಾದದಲ್ಲಿ)

ಯೋಹಾ 5:1–4

1ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು. 2ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. 3ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.)

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 1 ಆಗಸ್ಟ್ ಎಂದರೆ ನಾಗರಿಕ ಪಂಚಾಂಗದ 14 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು