ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 5 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 5 ಆಗಸ್ಟ್ 2027
ಗುರುವಾರ · ಸಾಮಾನ್ಯ ಕಾಲದ 18ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 18ನೇ ವಾರದ ಗುರುವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಮರಿಯಳ ಮಹಾ ಬಸಿಲಿಕದ ಪ್ರತಿಷ್ಠಾಪನೆ · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಮೊದಲನೆಯ ತಿಂಗಳಿನಲ್ಲಿ ಇಸ್ರಾಯೇಲರ ಸರ್ವಸಮೂಹದವರು “ಚಿನ್” ಎಂಬ ಮರುಭೂಮಿಗೆ ಬಂದು, ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ತೀರಿಹೋದಳು. ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು. 2ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಕೂಡಿಕೊಂಡರು. 3ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತುಹೋದಾಗಲೇ ನಾವೂ ಸಹ ಸತ್ತುಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು. 4ನೀವು ಯೆಹೋವನ ಸಮೂಹದವರಾದ ನಮ್ಮನ್ನೂ, ನಮ್ಮ ಪಶುಗಳನ್ನೂ ಈ ಮರಳುಗಾಡಿಗೆ ಕರೆದುಕೊಂಡು ಬಂದು ಯಾಕೆ ಸಾಯಿಸುತ್ತೀರಿ? 5ನಮ್ಮನ್ನು ಐಗುಪ್ತ ದೇಶದಿಂದ ಬರಮಾಡಿ ಈ ಕೆಟ್ಟ ಸ್ಥಳಕ್ಕೆ ಯಾಕೆ ಕರೆದುಕೊಂಡು ಬಂದಿದ್ದೀರಿ? ಈ ನೆಲದಲ್ಲಿ ಧಾನ್ಯವೂ, ಅಂಜೂರವೂ, ದ್ರಾಕ್ಷಿಯೂ, ದಾಳಿಂಬೆಯೂ ಮತ್ತು ಕುಡಿಯುವುದಕ್ಕೆ ನೀರೂ ಸಹ ಸಿಕ್ಕುವುದಿಲ್ಲ” ಎಂದು ಹೇಳುತ್ತಿದ್ದರು. 6ಮೋಶೆ ಮತ್ತು ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಹೋಗಿ ಬೋರಲುಬಿದ್ದಾಗ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು. 7ಆಗ ಯೆಹೋವನು ಮೋಶೆ ಸಂಗಡ ಮಾತನಾಡಿ, 8“ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರುಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟುಬರುವುದು, ನೀನು ಸಮೂಹದವರಿಗೂ, ಅವರ ಪಶುಗಳಿಗೂ ನೀರನ್ನು ಕುಡಿಯುವುದಕ್ಕೆ ಕೊಡಬಹುದು” ಎಂದು ಹೇಳಿದನು. 9ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಆ ಕೋಲನ್ನು ಆತನ ಸನ್ನಿಧಿಯಿಂದ ತೆಗೆದುಕೊಂಡನು. 10ಮೋಶೆ ಮತ್ತು ಆರೋನರು ಸಮೂಹದವರನ್ನು ಆ ಕಡಿದಾದ ಬಂಡೆಗೆ ಎದುರಾಗಿ ಕೂಡಿಸಿದರು. ಮೋಶೆ ಅವರಿಗೆ, “ದ್ರೋಹಿಗಳೇ, ಕೇಳಿರಿ, ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?” 11ಆಗ ಮೋಶೆ ತನ್ನ ಕೈಯನ್ನು ಮೇಲಕ್ಕೆ ಎತ್ತಿ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ನೀರು ಪ್ರವಾಹವಾಗಿ ಹೊರಟಿತು. ಸಮೂಹದವರೂ ಮತ್ತು ಅವರ ಪಶುಗಳೂ ನೀರು ಕುಡಿದರು. 12ಆಗ ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರಾಯೇಲರ ಎದುರಿನಲ್ಲಿ ನನ್ನ ಗೌರವವನ್ನು ಕಾಪಾಡದೆ ಹೋದುದರಿಂದ ಈ ಸಮೂಹದವರಿಗೆ ವಾಗ್ದಾನಮಾಡಿದ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗಬಾರದು” ಎಂದು ಹೇಳಿದನು. 13ಇಸ್ರಾಯೇಲರು ಅಲ್ಲಿ ಯೆಹೋವನ ಸಂಗಡ ವಾದಮಾಡಿದ್ದರಿಂದ ಆ ನೀರು ಬಂದ ಸ್ಥಳಕ್ಕೆ “ಮೆರೀಬಾ” ಎಂದು ಹೆಸರಾಯಿತು. ಅದಲ್ಲದೆ ಅಲ್ಲಿ ಯೆಹೋವನು ತನ್ನ ಪರಿಶುದ್ಧತೆಯನ್ನು ತೋರಿಸಿದನು.
ಪ್ರತಿವಚನ ಕೀರ್ತನೆ
1ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. 2ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ. 6ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. 7ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ, ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು. 8ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ, ಮಸ್ಸಾದಲ್ಲಿ ಮಾಡಿದ ದಿನದಂತೆ, ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ. 9ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
ಸುವಾರ್ತೆ
13ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು. 14ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು. 15ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?” 16ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು. 17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು. 18ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು. 19ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು. 20ಆಗ ಆತನು, ನಾನು ಕ್ರಿಸ್ತನಾಗಿದ್ದೆನೆಂಬುದನ್ನು ಯಾರಿಗೂ ಖಂಡಿತವಾಗಿ ಹೇಳಬೇಡಿರಿ ಎಂದು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು. 21ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವುದು ಅಗತ್ಯವೆಂದು ತನ್ನ ಶಿಷ್ಯರಿಗೆ ಹೇಳುವುದಕ್ಕೆ ಪ್ರಾರಂಭಿಸಿದನು. 22ಆಗ ಪೇತ್ರನು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ಕರ್ತನೇ, ದೇವರು ಅದನ್ನು ನಿನಗೆ ಬರಗೊಡಿಸದಿರಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಆತನನ್ನು ಗದರಿಸುವುದಕ್ಕೆ ಪ್ರಾರಂಭಿಸಿದನು. 23ಆತನು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು. ನನಗೆ ನೀನು ಅಡ್ಡಿಯಾಗಿದ್ದಿ, ಏಕೆಂದರೆ ನೀನು ದೇವರ ವಿಷಯಗಳ ಬಗ್ಗೆ ಯೋಚಿಸದೇ ಮನುಷ್ಯರ ವಿಷಯಗಳ ಬಗ್ಗೆ ಯೋಚಿಸುತ್ತೀ” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು