Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 29 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಜುಲೈ 2027

ಗುರುವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ವಾರದ ಗುರುವಾರ

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತರಾದ ಮಾರ್ಥ, ಮರಿಯ ಮತ್ತು ಲಾಜರ · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 40:16–21, 34–38

16ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು. 17ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ಮೋಶೆ ಗುಡಾರವನ್ನು ತೆರೆದನು. 18ಮೋಶೆಯು ಗುಡಾರವನ್ನು ತೆರೆದು ಅದಕ್ಕೆ ಮೆಟ್ಟುವಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು. 19ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿ ಅದನ್ನು ಮರೆಮಾಡಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಅದನ್ನೆಲ್ಲಾ ಮಾಡಿದನು. 20ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು. 21ಮೋಶೆಯು ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ಪರದೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು. 34ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿಕೊಂಡಿತು. 35ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಗೊಂಡಿದ್ದು ಯೆಹೋವನ ತೇಜಸ್ಸು ಪರಿಶುದ್ಧ ನಿವಾಸದ ತುಂಬಾ ಅವರಿಸಿ ಯೆಹೋವನ ಮಹಿಮೆಯು ಗುಡಾರದೊಳಗೆ ತುಂಬಿಕೊಂಡ್ದಿದರಿಂದಲೂ ಮೋಶೆಯು ಗುಡಾರದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. 36ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲರು ಮುಂದೆ ಪ್ರಯಾಣ ಮಾಡುತ್ತಿದ್ದರು. 37ಆ ಮೇಘವು ಮೇಲಕ್ಕೆ ಹೋಗದೇ ಇದ್ದು ಅದು ಹೊರಡುವ ತನಕ ಅವರು ಪ್ರಯಾಣ ಮಾಡದೆ ಇರುತ್ತಿದ್ದರು. 38ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣುಗಳ ಮುಂದೆ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಗುಡಾರದ ಮೇಲೆಯೂ ಇರುತ್ತಿತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಇರುತ್ತಿತ್ತು.

ಪ್ರತಿವಚನ ಕೀರ್ತನೆ

ಕೀರ್ತ 84:2–5, 7, 10

2ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ. 3ಆಹಾ, ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಅರಸನೇ, ನಿನ್ನ ಯಜ್ಞವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ, ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ! 4ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು. ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ. ಸೆಲಾ 5ನಿನ್ನಲ್ಲೇ ಬಲವನ್ನು ಹೊಂದುವ ಮನುಷ್ಯರು ಧನ್ಯರು. ಅವರು ಯಾತ್ರಿಕರಾಗಿ, 7ಅವರು ಹೆಚ್ಚು ಹೆಚ್ಚಾಗಿ ಬಲಹೊಂದಿ, ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು ಸೇರಿ, 10ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು, ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವುದೇ ಲೇಸು.

ಸುವಾರ್ತೆ

ಯೋಹಾ 11:19–27

ಅಥವಾ: ಲೂಕ 10:38–42

19ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು. 20ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು. 21ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ. 22ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು. 23ಯೇಸು ಆಕೆಗೆ, “ನಿನ್ನ ತಮ್ಮನು ಪುನಃ ಎದ್ದು ಬರುವನು” ಎಂದು ಹೇಳಿದನು. 24ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು. 25ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು, 26ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ, 27ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು