Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 28 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 28 ಜುಲೈ 2027

ಬುಧವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ವಾರದ ಬುಧವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 34:29–35

29ಮೋಶೆಯು ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದುಬಂದಾಗ ಅವನು ಯೆಹೋವನ ಸನ್ನಿಧಿಯಲ್ಲಿ ಇದ್ದು ಆತನ ಸಂಗಡ ಸಂಭಾಷಿಸಿದ್ದರಿಂದ ಅವನ ಮುಖವು ಪ್ರಕಾಶಮಾನವಾಗಿತ್ತು; ಆದರೆ ಅ ಪ್ರಭಾವವು ಅವನಿಗೆ ತಿಳಿದಿರಲಿಲ್ಲ. 30ಮೋಶೆಯ ಮುಖವು ಪ್ರಕಾಶಮಾನವಾಗಿರುವುದನ್ನು ಆರೋನನೂ ಇಸ್ರಾಯೇಲರೆಲ್ಲರೂ ನೋಡಿ ಅವನ ಹತ್ತಿರಕ್ಕೆ ಬರುವುದಕ್ಕೆ ಭಯಪಟ್ಟರು. 31ಆದರೆ ಮೋಶೆಯು ಅವರನ್ನು ಕರೆಯಲು ಆರೋನನೂ ಸಮೂಹದ ನಾಯಕರೆಲ್ಲರೂ ಅವನ ಬಳಿಗೆ ಬಂದರು; ಮೋಶೆ ಅವರ ಸಂಗಡ ಮಾತನಾಡಿದನು. 32ತರುವಾಯ ಇಸ್ರಾಯೇಲರೆಲ್ಲರೂ ಹತ್ತಿರಕ್ಕೆ ಬಂದರು. ಮೋಶೆಯು ತಾನು ಸೀನಾಯಿಬೆಟ್ಟದಲ್ಲಿ ಯೆಹೋವನಿಂದ ಹೊಂದಿದ ಆಜ್ಞೆಗಳನ್ನೆಲ್ಲಾ ಅವರಿಗೆ ತಿಳಿಸಿದನು. 33ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸಿದ ನಂತರ ತನ್ನ ಮುಖದ ಮೇಲೆ ಮುಸುಕುಹಾಕಿಕೊಂಡನು. 34ಮೋಶೆಯು ಯೆಹೋವನ ಸಂಗಡ ಮಾತನಾಡಬೇಕೆಂದು ಆತನ ಸನ್ನಿಧಿಗೆ ಹೋಗುವಾಗಲೆಲ್ಲಾ ಈ ಮುಸುಕನ್ನು ಹಾಕಿಕೊಳ್ಳುತ್ತಿದ್ದನು. ಹೊರಗೆ ಬಂದಾಗ ಆ ಮುಸುಕನ್ನು ತೆಗೆದಿಡುತ್ತಿದ್ದನು. ಅವನು ಹೊರಗೆ ಬಂದಾಗ ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲರಿಗೆ ತಿಳಿಸುತ್ತಿದ್ದನು. 35ಮೋಶೆಯ ಮುಖವು ಪ್ರಕಾಶಮಾನವಾಗಿರುವುದನ್ನು ಇಸ್ರಾಯೇಲರು ನೋಡುತ್ತಿದ್ದರು. ಆದಕಾರಣ ಅವನು ಯೆಹೋವನ ಸಂಗಡ ಮಾತನಾಡುವುದಕ್ಕೆ ಹೋಗುವವರೆಗೆ ತನ್ನ ಮುಖದ ಮೇಲೆ ಆ ಮುಸುಕನ್ನು ಪುನಃ ಹಾಕಿಕೊಂಡಿರುತ್ತಿದ್ದನು.

ಪ್ರತಿವಚನ ಕೀರ್ತನೆ

ಕೀರ್ತ 99:5–7, 9

5ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ. ಆತನು ಪರಿಶುದ್ಧನು. 6ಆತನ ಯಾಜಕರಲ್ಲಿ ಮೋಶೆ ಮತ್ತು ಆರೋನರೂ, ಆತನ ಹೆಸರಿನಲ್ಲಿ ಪ್ರಾರ್ಥಿಸುವವರೊಳಗೆ ಸಮುವೇಲನೂ ಪ್ರಾರ್ಥಿಸಿದಾಗೆಲ್ಲ, ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು. 7ಆತನು ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತನಾಡುತ್ತಿದ್ದನು; ಅವರು ಆತನ ವಿಧಿನಿಯಮಗಳನ್ನು ಕೈಕೊಂಡವರು. 9ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ. ನಮ್ಮ ಯೆಹೋವ ದೇವರು ಪರಿಶುದ್ಧನು.

ಸುವಾರ್ತೆ

ಮತ್ತಾ 13:44–46

44“ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು. 45ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. 46ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು