Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 27 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 27 ಜುಲೈ 2027

ಮಂಗಳವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ವಾರದ ಮಂಗಳವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 33:7–11; 34:5–9, 28

7ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ದೂರವಾಗಿ ಹಾಕಿದ್ದನು. ಅದಕ್ಕೆ ದೇವದರ್ಶನದ ಗುಡಾರ ಎಂದು ಹೆಸರಿಟ್ಟನು. ಯೆಹೋವನ ಉತ್ತರವನ್ನು ಬಯಸಿದವರೆಲ್ಲರೂ ಪಾಳೆಯದ ಹೊರಗಿದ್ದ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು. 8ಮೋಶೆಯು ಆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರೂ ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು, ಮೋಶೆಯು ಆ ಗುಡಾರದೊಳಕ್ಕೆ ಹೋಗುವ ತನಕ ಅವನನ್ನು ನೋಡುತ್ತಿದ್ದರು. 9ಮೋಶೆಯು ಆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು ಹಾಗು ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಿದ್ದನು. 10ಆ ಮೇಘಸ್ತಂಭವು ಗುಡಾರದ ಬಾಗಿಲಲ್ಲಿ ನಿಂತಿದ್ದನ್ನು ಜನರೆಲ್ಲರೂ ನೋಡಿ ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು. 11ಮನುಷ್ಯರೊಳಗೆ ಒಬ್ಬನೂ ತನ್ನ ಸ್ನೇಹಿತನೊಡನೆ ಹೇಗೆ ಮಾತನಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು. ಆನಂತರ ಮೋಶೆಯು ಪಾಳೆಯಕ್ಕೆ ಹಿಂತಿರುಗಿ ಬರುವನು. ಆದರೆ ನೂನನ ಮಗನಾದ ಯೆಹೋಶುವನೆಂಬ ಯೌವನಸ್ಥನಾದ ಅವನ ಶಿಷ್ಯನು ಆ ಗುಡಾರದಲ್ಲಿಯೇ ಇರುತ್ತಿದ್ದನು, ಅದರ ಬಳಿಯಿಂದ ದೂರ ಸರಿಯುತ್ತಿರಲಿಲ್ಲ. 34:5ಆಗ ಯೆಹೋವನು ಮೇಘದಲ್ಲಿ ಇಳಿದು ಬಂದು ಅಲ್ಲಿ ಅವನ ಹತ್ತಿರ ನಿಂತು ಯೆಹೋವನೆಂಬ ತನ್ನ ನಾಮವನ್ನು ಪ್ರಕಟಿಸಿದನು. 6ಯೆಹೋವನು ಮೋಶೆಗೆ ಎದುರಾಗಿ ಹೋಗುತ್ತಾ ಪ್ರಕಟಿಸಿ ಹೇಳಿದ್ದೇನೆಂದರೆ; “ಯೆಹೋವನೆಂಬ ದೇವರು ಕರುಣಾಳುವು, ಕೃಪಾಳುವು, ದೀರ್ಘಶಾಂತವುಳ್ಳವನು, ಪ್ರೀತಿಯುಳ್ಳವನು ಹಾಗು ನಂಬಿಗಸ್ತನಾದ ದೇವರು ಆಗಿದ್ದೇನೆ; 7ಸಾವಿರಾರು ತಲೆಮಾರುಗಳವರೆಗೂ ದಯೆತೋರಿಸುವವನು; ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡುವುದಿಲ್ಲ; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಮಾರುಗಳವರೆಗೆ ಬರಮಾಡುವವನು ಆಗಿದ್ದಾನೆ” ಎಂಬುದೇ. 8ಮೋಶೆ ತ್ವರೆಪಟ್ಟು ನೆಲಕ್ಕೆ ಬಾಗಿ ನಮಸ್ಕರಿಸಿ, 9“ಕರ್ತನೇ, ನಿನ್ನ ದೃಷ್ಟಿಯಲ್ಲಿ ದಯೆಯು ನನಗೆ ದೊರಕಿರುವುದಾದರೆ ನೀನೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಮೊಂಡುಬುದ್ಧಿಯವರೇ; ಆದಾಗ್ಯೂ ನೀನು ನಮ್ಮ ಪಾಪಗಳನ್ನೂ, ಅಧರ್ಮಗಳನ್ನು ಕ್ಷಮಿಸಿ ನಿನ್ನ ಸ್ವತ್ತಾಗಿ ನಮ್ಮನ್ನು ಸ್ವೀಕರಿಸಬೇಕು” ಎಂದನು. 28ಮೋಶೆಯು ಆ ಬೆಟ್ಟದಲ್ಲಿ ಯೆಹೋವನ ಸನ್ನಿಧಿಯಲ್ಲಿ ಹಗಲಿರುಳು ನಲ್ವತ್ತು ದಿನ ಇದ್ದನು. ಆ ದಿನಗಳಲ್ಲಿ ಅವನು ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ. ಆತನು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ಹತ್ತು ಆಜ್ಞೆಗಳನ್ನು ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.

ಪ್ರತಿವಚನ ಕೀರ್ತನೆ

ಕೀರ್ತ 103:6–13

6ಯೆಹೋವನು ನೀತಿಯನ್ನು ಸಾಧಿಸುವವನಾಗಿ, ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ. 7ಆತನು ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು. 8ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು. 9ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. 10ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. 11ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. 12ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. 13ತಂದೆಯು ಮಕ್ಕಳನ್ನು ಕನಿಕರಿಸುವಂತೆ, ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.

ಸುವಾರ್ತೆ

ಮತ್ತಾ 13:36–43

36ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು. 37ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು. 38ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆ ರಾಜ್ಯದ ಮಕ್ಕಳು. 39ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು. 40ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು. 41ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು. 42ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು 43ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು