ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 27 ಜುಲೈ
ಆರ್ಥೊಡಾಕ್ಸ್ ಪಂಚಾಂಗ · ಜುಲೈ 14 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 27 ಜುಲೈ 2027
ಮಂಗಳವಾರ · ಪಂಚಾಶತ್ತಮದ ನಂತರದ ಆರನೆಯ ವಾರ · ಸ್ವರ 4
ಹಬ್ಬಗಳು ಮತ್ತು ಸಂತರು
Apostle of the 70: Aquila (1st C)
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
1ದೇವರ ಚಿತ್ತದಂತೆ ಯೇಸು ಕ್ರಿಸ್ತನಿಂದ ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟ ಪೌಲನೂ ಮತ್ತು ನಮ್ಮ ಸಹೋದರನಾದ ಸೊಸ್ಥೆನನೂ, 2ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರಾದವರಿಗೂ, ಪರಿಶುದ್ಧರಾಗಿರಲು ಕರೆಯಲ್ಪಟ್ಟವರಿಗೂ, ನಮ್ಮ ಮತ್ತು ಅವರ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರೆಲ್ಲಿದ್ದರೂ ಅವರೆಲ್ಲರಿಗೂ ಬರೆಯುವುದು ಏನೆಂದರೆ, 3ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಉಂಟಾಗಲಿ. 4ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ. 5ಆತನು ಎಲ್ಲಾ ರೀತಿಯಲ್ಲಿಯೂ, ಎಲ್ಲಾ ನುಡಿಗಳಲ್ಲಿಯೂ, ಎಲ್ಲಾ ತಿಳಿವಳಿಕೆಯಲ್ಲಿಯೂ, ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 6ಕ್ರಿಸ್ತನ ಕುರಿತಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿರುವ ಹಾಗೆಯೇ ಆತನು ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ. 7ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು ನೀವು ಎದುರುನೋಡುತ್ತಾ ಇರುವುದರಿಂದ ಆತ್ಮೀಕ ಕೃಪಾವರದ ಕೊರತೆಯೂ ನಿಮಗೆ ಉಂಟಾಗುವುದಿಲ್ಲ, 8ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ನೀವು ನಿರಪರಾಧಿಗಳಾಗಿರುವಂತೆ ಆತನು ನಿಮ್ಮನ್ನು ಕಡೆಯವರೆಗೂ ದೃಢಪಡಿಸುವನು. 9ತನ್ನ ಮಗನೂ ಹಾಗೂ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ನಂಬಿಗಸ್ತನು.
ಪತ್ರಿಕೆ (ಬುಧವಾರಕ್ಕೆ)
9ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.” 10ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಪಡಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. 11ಮನುಷ್ಯನೊಳಗಿನ ಆಲೋಚನೆಗಳು ಅವನಲ್ಲಿರುವ ಮನುಷ್ಯತ್ಮನಿಗಲ್ಲದೆ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರಾಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ. 12ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ. 13ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ. 14ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು. 15ಪವಿತ್ರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿವೇಚಿಸಿ ತಿಳಿದುಕೊಳ್ಳುತ್ತಾನೆ; ಆದರೆ ಅವನಿಗೆ ಯಾರೂ ವಿವೇಚಿಸಿ ತಿಳಿಸಿಕೊಡಬೇಕಾಗಿಲ್ಲ. 16“ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು?” ಎಂದು ಬರೆದಿದೆಯಲ್ಲಾ. ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ. 3:1ಆದರೆ ಸಹೋದರರೇ ನಾನಂತೂ ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು. 2ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ. 3ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ? 4ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ? 5ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. 6ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ. 7ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು. 8ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.
ಸುವಾರ್ತೆ
24ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು. 26ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು. 27ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು. 28ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು. 29ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. 30ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು.
ಸುವಾರ್ತೆ (ಬುಧವಾರಕ್ಕೆ)
31ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು. 32ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು. 33ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” 34ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ. 35ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು. 36ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 14 ಜುಲೈ ಎಂದರೆ ನಾಗರಿಕ ಪಂಚಾಂಗದ 27 ಜುಲೈ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು