Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 26 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 26 ಜುಲೈ 2027

ಸೋಮವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ವಾರದ ಸೋಮವಾರ

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತರಾದ ಯೊವಾಕಿಮ್ ಮತ್ತು ಅನ್ನ, ಪೂಜ್ಯ ಕನ್ಯೆ ಮರಿಯಳ ತಂದೆತಾಯಿ · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ವಿಮೋ 32:15–24, 30–34

15ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಯು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಿಗೆಗಳ ಎರಡು ಪಕ್ಕಗಳಲ್ಲಿಯೂ ಅಕ್ಷರಗಳು ಬರೆದಿದ್ದವು. ಈ ಕಡೆಯೂ ಆ ಕಡೆಯೂ ಬರಹವಿತ್ತು. 16ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದು, ಅವುಗಳಲ್ಲಿ ಕೆತ್ತಿದ ಅಕ್ಷರಗಳು ದೇವರೇ ಬರೆದದ್ದಾಗಿತ್ತು. 17ಇಸ್ರಾಯೇಲರು ಉತ್ಸಾಹದಿಂದ ಕೂಗಾಡುತ್ತಾ ಇರಲಾಗಿ ಯೆಹೋಶುವನು ಆ ಶಬ್ದವನ್ನು ಕೇಳಿ, “ಪಾಳೆಯದ ಕಡೆಯಿಂದ ಯುದ್ಧಧ್ವನಿ ಕೇಳಿಸುತ್ತದೆ” ಎಂದು ಮೋಶೆಗೆ ಹೇಳಿದನು. 18ಅದಕ್ಕವನು, “ನನಗೆ ಕೇಳಿಸುವುದು ಜಯ ಧ್ವನಿಯೂ ಅಲ್ಲ, ವಿಜಯಗೀತೆಯೂ ಅಲ್ಲ ಸೋತು ಗೋಳಾಡುವವರ ಧ್ವನಿಯೂ ಅಲ್ಲ, ಗಾನಮಾಡುವವರ ಉಲ್ಲಾಸದ ಧ್ವನಿಯೇ ಆಗಿದೆ” ಅಂದನು. 19ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು. 20ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು. 21ಆಗ ಮೋಶೆ ಆರೋನನನ್ನು ಕುರಿತು, “ನೀನು ಈ ಜನರಿಂದ ಮಹಾ ಅಪರಾಧವನ್ನು ಮಾಡಿಸಿದಿಯಲ್ಲಾ ಹೀಗೆ ಮಾಡಿಸುವುದಕ್ಕೆ ಇವರು ನಿನಗೇನು ಮಾಡಿದರು?” ಎಂದು ವಿಚಾರಿಸಲು, 22ಆರೋನನು, “ಸ್ವಾಮಿಯವರು, ರೋಷಗೊಳ್ಳಬಾರದು ಈ ಜನರು ದುಷ್ಟಸ್ವಭಾದವರು, ಹಠಮಾರಿಗಳು ಎಂಬುದು ನಿನಗೆ ಗೊತ್ತಿಲ್ಲವೇ? 23ಅವರು ನನ್ನ ಬಳಿಗೆ ಬಂದು, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಬ್ಬ ದೇವರನ್ನು ಮಾಡಿಸಿಕೊಡು, ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆಗೆ ಏನಾಯಿತೋ ಗೊತ್ತಿಲ್ಲ’ ಅಂದರು. 24ಅದಕ್ಕೆ ನಾನು ‘ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರೂ ಅದನ್ನು ಬಿಚ್ಚಿ ನನಗೆ ಕೊಡಬೇಕು’ ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರುವಿನ ರೂಪವು ಉಂಟಾಯಿತು” ಅಂದನು. 30ಮರುದಿನದಲ್ಲಿ ಮೋಶೆಯು ಜನರಿಗೆ, “ನೀವು ಮಹಾ ಪಾಪವನ್ನು ಮಾಡಿರುವಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು. ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ನಾನು ಮಾಡಬಹುದೇನೋ” ಎಂದು ಹೇಳಿದನು. 31ಆಗ ಮೋಶೆ ಯೆಹೋವನ ಬಳಿಗೆ ತಿರುಗಿ ಹೋಗಿ, “ಅಯ್ಯೋ! ಈ ಜನರು ಮಹಾ ಪಾಪವನ್ನು ಮಾಡಿದ್ದಾರೆ. ಚಿನ್ನದ ಹೋರಿಕರುವನ್ನು ಮಾಡಿ ದೇವರೆಂದುಕೊಂಡಿದ್ದಾರೆ. 32ಆದರೂ ನೀನು ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ ಜೀವಿತರ ಪುಸ್ತಕದಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು. 33ಅದಕ್ಕೆ ಯೆಹೋವನು ಮೋಶೆಗೆ, “ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪುಸ್ತಕದಿಂದ ನಾನು ಅಳಿಸಿಬಿಡುವೆನು. 34ನೀನು ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡೆಸಿಕೊಂಡು ಹೋಗು. ನೋಡು, ನನ್ನ ದೂತನು ನಿನ್ನ ಮುಂದೆ ನಡೆದು ಮುನ್ನಡೆಸುವನು, ಆದರೂ ನನ್ನ ನ್ಯಾಯತೀರ್ಪಿನ ದಿನದಲ್ಲಿ ನಾನು ಅವರ ಪಾಪಕ್ಕೆ ತಕ್ಕಂತೆ ಅವರನ್ನು ದಂಡಿಸುವೆನು.”

ಪ್ರತಿವಚನ ಕೀರ್ತನೆ

ಕೀರ್ತ 106:19–23

19ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು. 20ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು. 21ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ, 22ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು. 23ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

ಸುವಾರ್ತೆ

ಮತ್ತಾ 13:31–35

31ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು. 32ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು. 33ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.” 34ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ. 35ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು