Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 25 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ಜುಲೈ 2027

ಭಾನುವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

2 ಅರಸು 4:42–44

42ಒಂದು ದಿನ ಬಾಳ್ ಷಾಲಿಷಾ ಊರಿನ ಒಬ್ಬ ಮನುಷ್ಯನು ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ, ಒಂದು ಚೀಲದ ತುಂಬಾ ಹಸೀ ತೆನೆಗಳನ್ನೂ, ಪ್ರಥಮಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವರ ಮನುಷ್ಯನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, “ಇದನ್ನು ಜನರಿಗೆ ಕೊಡು ಅವರು ಊಟಮಾಡಲಿ” ಎಂದು ಹೇಳಿದನು. 43ಅದಕ್ಕೆ ಅವನು, “ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ” ಎಂದನು. ಎಲೀಷನು ಅವನಿಗೆ, “ಇರಲಿ, ಕೊಡು. ಅವರು ಊಟಮಾಡಲಿ. ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರೆಂದು ಯೆಹೋವನು ಎನ್ನುತ್ತಾನೆ” ಎಂದು ಹೇಳಿದನು. 44ಸೇವಕರು ಬಡಿಸಲು, ಯೆಹೋವನ ಮಾತಿನಂತೆ ಜನರು ಊಟಮಾಡಿ, ತೃಪ್ತರಾಗಿ, ಇನ್ನೂ ಉಳಿಸಿಕೊಂಡರು.

ಪ್ರತಿವಚನ ಕೀರ್ತನೆ

ಕೀರ್ತ 145:10–11, 15–18

10ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. 11ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು, ನಿನ್ನ ಪ್ರತಾಪವನ್ನು ವರ್ಣಿಸುವರು. 15ಯೆಹೋವನೇ, ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ, ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತಿ. 16ನೀನು ಕೈತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಿ. 17ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು. 18ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಎರಡನೆಯ ವಾಚನ

ಎಫೆ 4:1–6

1ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 3ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. 4ನೀವು ಕರೆಯಲ್ಪಟ್ಟಾಗ ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಒಬ್ಬನೇ ಆತ್ಮನನ್ನು ಹೊಂದಿದವರು, 5ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ನಂಬಿಕೆಯು ಒಂದೇ, ದೀಕ್ಷಾಸ್ನಾನ ಒಂದೇ, 6ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

ಸುವಾರ್ತೆ

ಯೋಹಾ 6:1–15

1ತರುವಾಯ ಯೇಸು ಗಲಿಲಾಯದ ಸಮುದ್ರವನ್ನು ದಾಟಿ, ಆಚೆ ದಡಕ್ಕೆ ಹೋದನು. ಅದಕ್ಕೆ ತಿಬೇರಿಯ ಸಮುದ್ರವೆಂತಲೂ ಹೇಳುತ್ತಾರೆ. 2ಬಹು ಜನರು ಆತನು ರೋಗಿಗಳಲ್ಲಿ ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ, ಜನರ ದೊಡ್ಡಗುಂಪು ಆತನನ್ನು ಹಿಂಬಾಲಿಸುತ್ತಿತ್ತು. 3ಆದರೆ ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕುಳಿತುಕೊಂಡನು. 4ಆಗ ಯೆಹೂದ್ಯರ ಪಸ್ಕದ ಹಬ್ಬವು ಹತ್ತಿರವಾಗಿತ್ತು. 5ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಜನರ ದೊಡ್ಡಗುಂಪು ತನ್ನ ಕಡೆಗೆ ಬರುವುದನ್ನು ನೋಡಿ “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ?” ಎಂದು ಫಿಲಿಪ್ಪನನ್ನು ಕೇಳಿದನು. 6ತಾನು ಮಾಡಲಿದ್ದಕಾರ್ಯ ಯೇಸುವಿಗೆ ತಿಳಿದಿದ್ದರೂ, ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ, ಆ ಪ್ರಶ್ನೆಯನ್ನು ಕೇಳಿದನು. 7ಅದಕ್ಕೆ ಫಿಲಿಪ್ಪನು, “ಪ್ರತಿಯೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೂ ಇನ್ನೂರು ದಿನಾರಿ ಮೌಲ್ಯದ ರೊಟ್ಟಿಯಾದರೂ ಅವರಿಗೆ ಸಾಲುವುದಿಲ್ಲ” ಎಂದನು. 8ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ; 9“ಇಲ್ಲಿ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ, ಎರಡು ಮೀನುಗಳೂ ಇವೆ. ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು?” ಎಂದು ಹೇಳಲು, 10ಯೇಸು “ಆ ಜನರನ್ನು ಊಟಕ್ಕೆ ಕುಳ್ಳಿರಿಸಿರಿ” ಎಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು. ಜನರು ಹುಲ್ಲಿನ ಮೇಲೆ ಕುಳಿತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. 11ಆಮೇಲೆ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಹಂಚಿದನು. ಅದೇ ರೀತಿ ಮೀನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದನು. 12ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ, ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಎಂದು ಹೇಳಿದನು. 13ಅವರು ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಕೂಡಿಸಿ, ಹನ್ನೆರಡು ಪುಟ್ಟಿಗಳಿಗೆ ತುಂಬಿಸಿದರು. 14ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ, “ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಈತನೇ” ಎಂದು ಹೇಳಿಕೊಂಡರು. 15ಆಗ ಯೇಸು, ಅವರು ಬಂದು ತನ್ನನ್ನು ಹಿಡಿದುಕೊಂಡು ಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ತಿಳಿದುಕೊಂಡು ಪುನಃ ತಾನೊಬ್ಬನೇ ಬೆಟ್ಟಕ್ಕೆ ಹೋಗಿಬಿಟ್ಟನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು