ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 20 ಜುಲೈ
ಆರ್ಥೊಡಾಕ್ಸ್ ಪಂಚಾಂಗ · ಜುಲೈ 7 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 20 ಜುಲೈ 2027
ಮಂಗಳವಾರ · ಪಂಚಾಶತ್ತಮದ ನಂತರದ ಐದನೆಯ ವಾರ · ಸ್ವರ 3
ಹಬ್ಬಗಳು ಮತ್ತು ಸಂತರು
Venerable Thomas of Mt Maleon (10th C)
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
9ಯಾಕೆಂದರೆ ಸತ್ತವರಿಗೂ, ಜೀವಿಸುವವರಿಗೂ ಒಡೆಯನಾಗಬೇಕಂತಲೇ ಕ್ರಿಸ್ತನು ಸತ್ತು ಜೀವಿತನಾದನು. 10ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವುದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವುದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕು. 11ಪವಿತ್ರ ಶಾಸ್ತ್ರದಲ್ಲಿ: “ನಾನು ಜೀವಿಸುವುದರಿಂದ ಪ್ರತಿಯೊಬ್ಬನೂ ನನ್ನ ಮುಂದೆ ಮೊಣಕಾಲೂರುವನು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಆರಿಕೆಮಾಡುವರು ಎಂದು ಕರ್ತನು ಹೇಳುತ್ತಾನೆ” ಎಂದು ಬರೆದಿದೆ. 12ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು. 13ಆದಕಾರಣ, ಇನ್ನು ಮೇಲೆ ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ, ಅಡೆತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ. 14ಯಾವ ಪದಾರ್ಥವೂ ಸ್ವತಃ ಅಶುದ್ಧವಾದದ್ದಲ್ಲವೆಂದು ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ; ಆದರೆ ಯಾವುದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವಾಗಿರಲಿ. 15ನೀನು ತೆಗೆದುಕೊಳ್ಳುವ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾದರೆ ನೀನು ಪ್ರೀತಿಗೆ ತಕ್ಕಂತೆ ನಡೆಯುವವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಪ್ರಾಣಕೊಟ್ಟನೋ ಅವನನ್ನು ನಿನಗೆ ಇಷ್ಟವಾದ ಆಹಾರದ ನಿಮಿತ್ತ ಕೆಡಿಸಬಾರದು. 16ನಿಮಗಿರುವ ಉತ್ತಮ ಕ್ರಮಗಳು ದೂಷಣೆಗೆ ಆಸ್ಪದವಾಗಬಾರದು. 17ಯಾಕೆಂದರೆ ತಿನ್ನುವುದೂ, ಕುಡಿಯುವುದೂ ದೇವರ ರಾಜ್ಯವಲ್ಲ ನೀತಿಯೂ, ಸಮಾಧಾನವೂ, ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ. 18ಈ ಪ್ರಕಾರವಾಗಿ ಕ್ರಿಸ್ತನ ಸೇವೆಯನ್ನು ಮಾಡುವವನು ದೇವರನ್ನು ಮೆಚ್ಚಿಸುವವನೂ, ಮನುಷ್ಯರಿಗೆ ಒಳ್ಳೆಯದನ್ನು ಮಾಡುವವನೂ ಆಗಿರಲಿ.
ಪತ್ರಿಕೆ (ಬುಧವಾರಕ್ಕೆ)
7ಆದ್ದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರನ್ನು ಮಹಿಮೆಪಡಿಸಿರಿ. 8ಯಾಕೆಂದರೆ ಕ್ರಿಸ್ತನು ಪೂರ್ವಿಕರಿಗೆ ಉಂಟಾದ ದೇವರ ವಾಗ್ದಾನಗಳನ್ನು ದೃಢಪಡಿಸಿ ಆತನ ಸತ್ಯವನ್ನು ತೋರಿಸುವುದಕ್ಕಾಗಿ ಸುನ್ನತಿಯೆಂಬ ಸಂಸ್ಕಾರಕ್ಕೆ ಸೇವಕನಾಗಿದ್ದಾನೆಂದೂ, 9ಅನ್ಯಜನರು ದೇವರನ್ನು ಆತನ ದಯೆಯ ನಿಮಿತ್ತ ಕೊಂಡಾಡುವುದಕ್ಕಾಗಿಯೂ ಇದನ್ನು ಹೇಳುತ್ತಿದ್ದೇನೆ. ಇದಕ್ಕೆ ಸರಿಯಾಗಿ ಧರ್ಮಶಾಸ್ತ್ರದಲ್ಲಿಯೂ ಈ ರೀತಿಯಾಗಿ ಬರೆದಿದೆ, “ಈ ಕಾರಣದಿಂದ ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು” ಎಂದೂ, 10ಇನ್ನೊಮ್ಮೆ, “ಅನ್ಯಜನಾಂಗಗಳಿರಾ ದೇವರ ಜನರೊಡನೆ ಉಲ್ಲಾಸಪಡಿರಿ” ಎಂದೂ, 11ಮತ್ತೊಮ್ಮೆ, “ಸರ್ವಜನಾಂಗಗಳೇ, ಕರ್ತನನ್ನು ಕೀರ್ತಿಸಿರಿ, ಸಮಸ್ತಪ್ರಜೆಗಳು ಆತನನ್ನು ಸಂಕೀರ್ತಿಸಲಿ” ಎಂದೂ ಬರೆದದೆ. 12ಮತ್ತೊಮ್ಮೆ, ಯೆಶಾಯನು ಹೇಳುವುದೇನಂದರೆ, “ಇಷಯನ ವಂಶಸ್ಥನೂ ಅಂದರೆ ಜನಾಂಗಗಳನ್ನು ಆಳತಕ್ಕವನು ಬರುತ್ತಾನೆ. ಜನಾಂಗಗಳು ಆತನನ್ನು ನಿರೀಕ್ಷಿಸುತ್ತಿರುವರು.” 13ನಿರೀಕ್ಷೆಯನ್ನು ಕೊಡುವ ದೇವರು ಪವಿತ್ರಾತ್ಮನ ಶಕ್ತಿಯಿಂದ ಸಮೃದ್ಧವಾದ ನಿರೀಕ್ಷೆಯುಳ್ಳವರಾಗಿ ನಂಬುವುದರಿಂದ ಉಂಟಾಗುವ ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಲ್ಲಿ, ನೀವು ಪವಿತ್ರಾತ್ಮನಲ್ಲಿ ಬಲಗೊಂಡವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ. 14ನನ್ನ ಸಹೋದರರೇ, ನೀವಂತೂ ಒಳ್ಳೆತನದಿಂದ ತುಂಬಿದವರಾಗಿದ್ದು, ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿಹೇಳುವುದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ದೃಢವಾಗಿ ನಂಬಿದ್ದೇನೆ. 15ಆದರೂ ಪ್ರಿಯರೇ, ನಿಮ್ಮನ್ನು ನೆನಪಿಸುವುದಕ್ಕಾಗಿ ಕೆಲವೊಂದು ವಿಷಯಗಳನ್ನು ಹೆಚ್ಚಾದ ಧೈರ್ಯದಿಂದ ಬರೆದಿದ್ದೇನೆ. ಯಾಕೆಂದರೆ ನಾನು ಅನ್ಯಜನರಿಗೋಸ್ಕರ ಯೇಸು ಕ್ರಿಸ್ತನ ಸೇವಕನಾಗುವುದಕ್ಕೆ ನನಗೆ ದೇವರ ಆಶೀರ್ವಾದವಾಯಿತು. ನಾನು ದೇವರ ಸುವಾರ್ತಾ ಸೇವೆಯನ್ನು ಯಾಜಕ ಸೇವೆ ಎಂಬಂತೆ ನಡಿಸಿ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ಸಮರ್ಪಕವಾಗುವಂತೆ ಯತ್ನಿಸುವವನಾಗಿದ್ದೇನೆ.
ಸುವಾರ್ತೆ
14ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು. 15ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು. 16ಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತನ್ನ ಬಗ್ಗೆ ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. 22ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು. 23ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು. 24ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು. 25ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು. 26ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನ ವಿರುದ್ಧವಾಗಿ ಹೋರಾಡಿದ ಹಾಗಾಯಿತು, ಹಾಗಾದರೆ ಅವನ ರಾಜ್ಯವು ಹೇಗೆ ನಿಂತಿತು? 27ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ಅವರೇ ನಿಮಗೆ ನ್ಯಾಯತೀರಿಸುವರು. 28ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ? 29ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಗೆ ನುಗ್ಗಿ ಅವನ ಸೊತ್ತನ್ನು ಸುಲುಕೊಳ್ಳುವುದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು. 30ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ.
ಸುವಾರ್ತೆ (ಬುಧವಾರಕ್ಕೆ)
38ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ, 39“ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತಾರೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ. 40ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು. 41ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು. 42ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು. 43“ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. 44ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ, ಗುಡಿಸಿ, ಅಲಂಕರಿಸಿರುವುದನ್ನು ಕಂಡು, 45ತರುವಾಯ ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುವುದು. ಅವು ಒಳ ನುಗ್ಗಿ ಅಲ್ಲಿ ವಾಸ ಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದಾಗುವುದು. ಇದರಂತೆಯೇ ಈ ದುಷ್ಟ ಸಂತತಿಗೆ ಆಗುವುದು” ಅಂದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 7 ಜುಲೈ ಎಂದರೆ ನಾಗರಿಕ ಪಂಚಾಂಗದ 20 ಜುಲೈ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು