Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 10 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 10 ಜುಲೈ 2027

ಶನಿವಾರ · ಸಾಮಾನ್ಯ ಕಾಲದ 14ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 14ನೇ ವಾರದ ಶನಿವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಶನಿವಾರದ ಪೂಜ್ಯ ಕನ್ಯೆ ಮರಿಯಳ ಸ್ಮರಣೆ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಆದಿ 49:29–32; 50:15–26

29ಇಸ್ರಾಯೇಲನು ತನ್ನ ಮಕ್ಕಳಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ, “ನಾನು ನನ್ನ ಪೂರ್ವಿಕರ ಬಳಿಗೆ ಸೇರಬೇಕಾದ ಕಾಲವು ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ ನನ್ನನ್ನು ನನ್ನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಬೇಕು. 30ಆ ಗವಿಯು ಕಾನಾನ್ ದೇಶದ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿ ಇದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತವಾಗಿ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು. 31ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು. ಅಲ್ಲಿ ನಾನು ಲೇಯಳನ್ನು ಸಮಾಧಿಮಾಡಿದ್ದೇನೆ. 32ಹೊಲದೊಂದಿಗೆ ಹಿತ್ತಿಯರಿಂದ ಕ್ರಯಕ್ಕೆ ತೆಗೆದುಕೊಂಡ ಆ ಗುಹೆಯೊಳಗೆ ನನಗೂ ಸಮಾಧಿಮಾಡಬೇಕು” ಎಂದನು. 50:15ಯೋಸೇಫನ ಅಣ್ಣತಮ್ಮಂದಿರು ತಂದೆ ಸತ್ತದ್ದನ್ನು ಕಂಡು, “ಒಂದು ವೇಳೆ ಯೋಸೇಫನು ನಮ್ಮನ್ನು ದ್ವೇಷಿಸಿ ನಾವು ಅವನಿಗೆ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಮಗೆ ಶಿಕ್ಷೆಯನ್ನು ಕೊಡಬಹುದು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 16ಅವರು ಯೋಸೇಫನಿಗೆ, ನಿನ್ನ ತಂದೆಯು ಸಾಯುವುದಕ್ಕಿಂತ ಮೊದಲು ನಮಗೆ ಅಪ್ಪಣೆ ಮಾಡಿದ್ದೇನೆಂದರೆ, 17“ನಿನ್ನ ಅಣ್ಣಂದಿರಾದ ನಾವು ನಿನಗೆ ಕೇಡು ಮಾಡಿದ್ದು ನಿಜವೇ. ಆದರೂ ನಮ್ಮ ತಂದೆಯ ದೇವರನ್ನು ಆರಾಧಿಸುವವರು, ಸೇವಕರೂ ಆದ ನಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ” ಎಂದು ಯೋಸೇಫನ ಬಳಿ ಬೇಡಿಕೊಳ್ಳಿರಿ ಎಂದು ಹೇಳಿದರು. ಯೋಸೇಫನು ಈ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿದನು. 18ಇದಲ್ಲದೆ ಅಣ್ಣಂದಿರು ತಾವೇ ಬಂದು ಅವನ ಮುಂದೆ ಅಡ್ಡಬಿದ್ದು, “ಇಗೋ ನಾವು ನಿನಗೆ ಗುಲಾಮರು” ಎಂದರು. 19ಯೋಸೇಫನು ಅವರಿಗೆ, “ಹೆದರಬೇಡಿರಿ, ನಾನೇನು ದೇವರ ಸ್ಥಾನದಲ್ಲಿ ಇದ್ದೇನೋ? 20ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದಿರಿ. ಆದರೆ ದೇವರು ನನ್ನನ್ನು ಮೇಲಾಗಬೇಕೆಂದು ಸಂಕಲ್ಪಿಸಿದನು; ಆದುದರಿಂದ ಇಂದು ನೀವು ಕಾಣುವಂತೆ, ಅನೇಕ ಜನರ ಪ್ರಾಣವು ಸಂರಕ್ಷಿಸಲ್ಪಟ್ಟಿತ್ತು” ಎಂದನು. 21ಆದುದರಿಂದ ನೀವು ಸ್ವಲ್ಪವೂ ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು. ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತನಾಡಿದನು. 22ಹೀಗೆ ಯೋಸೇಫನು, ಅವನ ತಂದೆಯ ಮನೆಯವರೂ ಐಗುಪ್ತ ದೇಶದಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು. 23ಅವನು ಎಫ್ರಾಯೀಮನ ಮಕ್ಕಳ ಮೊಮ್ಮಕ್ಕಳನ್ನು ಅಂದರೆ ಮೂರನೇ ತಲೆಮಾರಿನವರೆಗೂ ನೋಡಿದನು. ಮತ್ತು ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಅವರೂ ಯೋಸೇಫನ ಮಡಿಲಿನಲ್ಲಿಯೇ ಬೆಳೆದರು. ಅವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡನು. 24ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ, “ನನಗೆ ಅವಸಾನಕಾಲ ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ತಾನು ಅಬ್ರಹಾಮ, ಇಸಾಕ್, ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣಮಾಡಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನು” ಎಂದು ತಿಳಿದುಕೊಳ್ಳಿರಿ. 25ಇದಲ್ಲದೆ ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸುವನು. ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು” ಎಂದು ಅವರಿಂದ ಪ್ರಮಾಣಮಾಡಿಸಿದನು. 26ಯೋಸೇಫನು ನೂರಹತ್ತು ವರ್ಷದವನಾಗಿ ಪ್ರಾಣ ಬಿಟ್ಟನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ತುಂಬಿ ಐಗುಪ್ತ ದೇಶದೊಳಗೆ ಅದನ್ನು ಪೆಟ್ಟಿಗೆಯಲ್ಲಿ ಇರಿಸಿದರು.

ಪ್ರತಿವಚನ ಕೀರ್ತನೆ

ಕೀರ್ತ 105:1–4, 6–7

1ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ. 2ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ. 3ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ. 4ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. 6ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ. 7ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.

ಸುವಾರ್ತೆ

ಮತ್ತಾ 10:24–33

24“ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಒಡೆಯನಿಗಿಂತ ಆಳು ದೊಡ್ಡವನಲ್ಲ. 25ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು? 26ಆದರೂ ಅವರಿಗೆ ಹೆದರಬೇಡಿರಿ. ಮರೆಯಾಗಿರುವ ಯಾವುದೂ ವ್ಯಕ್ತವಾಗದೆ ಇರುವುದಿಲ್ಲ; ಬೆಳಕಿಗೆ ಬಾರದ ರಹಸ್ಯವು ಇಲ್ಲ. 27ನಾನು ಕತ್ತಲಲ್ಲಿ ನಿಮಗೆ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ. 28ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ. 29ಕಾಸಿಗೆ ಎರಡು ಗುಬ್ಬಿಗಳನ್ನು ಮಾರುವುದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳದು. 30ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚು ಬೆಲೆಬಾಳುವವರಾಗಿದ್ದೀರಿ. 32“ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. 33ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು